March 13, 2026

ಕೂರತ್ ತಂಙಳ್ ಉರೂಸ್ ಸಮಾರಂಭಕ್ಕೆ ಹರಿದು ಬಂದ ಜನಸಾಗರ: ನೂಕುನುಗ್ಗಲಿನಲ್ಲಿ ಹಲವು ಮಂದಿ ಅಸ್ವಸ್ಥ

0
image_editor_output_image780587952-1751210388218

ಪುತ್ತೂರು/ಕಡಬ: ಕುದ್ಮಾರ್ ಕೂರತ್ ಫಝಲ್ ನಗರದಲ್ಲಿ ‘ಕೂರತ್ ತಂಙಳ್’ ಎಂದೇ ಪ್ರಸಿದ್ಧರಾಗಿದ್ದ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ ಅವರ ಸ್ಮರಣಾರ್ಥ ನಡೆದ ವಾರ್ಷಿಕ ಉರೂಸ್ ಮುಬಾರಕ್‌ನ ಕೊನೆಯ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದ ಪರಿಣಾಮ, ನೂಕುನುಗ್ಗಲಿನಲ್ಲಿ ಉಸಿರುಗಟ್ಟಿ ಹಲವರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಗಂಟೆಗಟ್ಟಲೆ ಪರದಾಡಿದರು.

ಜೂನ್ 26ರಿಂದ 29ರವರೆಗೆ ಆಯೋಜಿಸಲಾಗಿದ್ದ ಉರೂಸ್‌ನ ಅಂತಿಮ ದಿನದ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ಸುಮಾರು 30-40 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ತಂಙಳ್ ಅವರ ಮೇಲಿನ ಅಭಿಮಾನದಿಂದಾಗಿ ರಾಜ್ಯದ ನಾನಾ ಭಾಗಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ವ್ಯವಸ್ಥೆಗಳು ಕುಸಿದುಬಿದ್ದವು.

ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಹಸ್ನಾ (18), ಪಾಯಿಝಾ (18), ಸಮ್ರಿನ್ (19), ಮೈಮೂನಾ (36) ಸೇರಿದಂತೆ ಆರು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಮೂವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯವಾಗಿ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಮಧ್ಯಾಹ್ನದ ಅನ್ನದಾನದ ಸಂದರ್ಭದಲ್ಲಿ ಊಟ ಖಾಲಿಯಾದಾಗ ಸರತಿ ಸಾಲಿನಲ್ಲಿ ತಳ್ಳಾಟ ಉಂಟಾಗಿ ಈ ಘಟನೆ ಸಂಭವಿಸಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಆದರೆ, ಸ್ಥಳದಲ್ಲಿದ್ದ ಜೇನುಗೂಡಿಗೆ ಹಾನಿಯಾಗಿ ಜೇನುನೊಣಗಳು ದಾಳಿ ನಡೆಸಿವೆ ಎಂಬ ವದಂತಿಯೂ ಹಬ್ಬಿತ್ತು. ಆದಾಗ್ಯೂ, ಆಸ್ಪತ್ರೆಗೆ ದಾಖಲಾದವರ ದೇಹದ ಮೇಲೆ ಜೇನುನೊಣ ಕಡಿತದ ಯಾವುದೇ ಕುರುಹುಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!