ಉಡುಪಿ: ಶಾಲೆಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಕರೆ: ಆರೋಪಿ ಮಹಿಳೆ ಅಹಮದಾಬಾದ್ ನಲ್ಲಿ ಸೆರೆ
ಉಡುಪಿ: ನಗರದ ಖಾಸಗಿ ಶಾಲೆಯೊಂದಕ್ಕೆ ಇ-ಮೇಲ್ ಮೂಲಕ ಹುಸಿ ಬಾಂಬ್ ಕರೆ ಬಂದಿರುವ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯೊಬ್ಬರನ್ನು ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆಕೆಯೇ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗುತ್ತಿದೆ.
ಕಳೆದ ವರ್ಷವೂ ನಗರದ ಭಾಗದಲ್ಲಿರುವ ವಿದ್ಯಾಸಂಸ್ಥೆಯೊಂದಕ್ಕೆ ಇದೇ ರೀತಿ ಹುಸಿ ಬಾಂಬ್ ಮೈಲ್ ಬಂದಿದ್ದು, ಅದರಲ್ಲಿಯೂ ಈಕೆಯ ಕೈವಾಡ ಇದೆಯೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.
ಚೆನ್ನೈ ಮೂಲದ ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಐಟಿ ಸಂಸ್ಥೆಯ ಹಿರಿಯ ಸಲಹೆಗಾರೆಯಾಗಿರುವ ರೆನೆ ಜೋಶಿಲ್ಡಾ ಎಂಬಾಕೆ ಹುಸಿ ಇ-ಮೇಲ್ ಐಡಿ ಮತ್ತು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಬಳಸಿ ಈ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದಳು. ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ದೆಹಲಿ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಾದ್ಯಂತ ಈ ಇ-ಮೇಲ್‌ಗಳನ್ನು ಕಳುಹಿಸಿದ್ದು ಪತ್ತೆಯಾಗಿದೆ. ಆರೋಪಿ ಮಹಿಳೆಯು ಈ ಸಂಸ್ಥೆಗಳಿಗೆ ಒಟ್ಟು 21 ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿರುವುದಾಗಿ ಪತ್ತೆಹಚ್ಚಲಾಗಿದೆ.
ಜೂನ್ 3, 2025 ರಂದು ಬೆಳಿಗ್ಗೆ 10:58 ಕ್ಕೆ divijprabhakaraO@gmail.com ನಿಂದ ಈ ಇ-ಮೇಲ್ ಬಂದಿತ್ತು. ಸೈಬರ್ ಕ್ರೈಂ ಬ್ರಾಂಚ್ ಮಾನವ ಗುಪ್ತಚರ ಮತ್ತು ಸೈಬರ್ ಪರಿಕರಗಳನ್ನು ಒಳಗೊಂಡಂತೆ ಸಂಪೂರ್ಣ ತಾಂತ್ರಿಕ ವಿಶ್ಲೇಷಣೆ ನಡೆಸಿತು. ಇದರಿಂದಾಗಿ ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿರುವ ಆರೋಪಿ ರೆನೆ ಜೋಶೀಲ್ಡಾಳನ್ನು ಪತ್ತೆಹಚ್ಚಲು ಸಹಾಯವಾಯಿತು. ನಿಖರ ಪುರಾವೆಗಳನ್ನು ಸಂಗ್ರಹಿಸಿದ ನಂತರ, ಚೆನ್ನೈಗೆ ತಂಡವನ್ನು ಕಳುಹಿಸಲಾಗಿತ್ತು. ಅಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಯಿತು. ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.
ಆಕೆಯನ್ನು ವಶಕ್ಕೆ ನೀಡುವಂತೆ ಈಗಾಗಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರ ಬರೆದಿದ್ದು, ಅಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ಉಡುಪಿಗೆ ಹಸ್ತಾಂತರವಾಗುವ ಸಾಧ್ಯತೆಗಳಿವೆ.





