ವಿಟ್ಲ ಪೇಟೆಯಲ್ಲಿ ಟ್ರಾಫಿಕ್ ಕಿರಿಕಿರಿ: ಪ.ಪಂ, ಪೊಲೀಸ್ ಇಲಾಖೆ, ವಾಹನ ಚಾಲಕರ ಸಭೆ: ಜಿಲ್ಲಾಧಿಕಾರಿಗಳ ಆದೇಶ ಸೋಮವಾರದಿಂದಲೇ ಜಾರಿ
ವಿಟ್ಲ: ವಿಟ್ಲ ಪೇಟೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ವಿಟ್ಲ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಬಸ್, ಕಾರು, ರಿಕ್ಷಾ, ಟಾಂಟಾಮ್ ವಾಹನ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.
ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುವ ಕಾರಣ ಬ್ಯಾನರ್ ಅಳವಡಿಸುವುದನ್ನು ಕಟ್ಟು ನಿಟ್ಟಿನಲ್ಲಿ ನಿಷೇಧಿಸಲಾಗಿದೆ. ಫುಟ್ ಪಾತ್ ಗಳಲ್ಲಿ ಫಲಕ ಇಟ್ಟಿರುವುದನ್ನು ತಕ್ಷಣ ತೆರವು ಮಾಡಬೇಕು. ಬಸ್ ನವರು ನಿಲ್ದಾಣದ ಹೊರತು ಬೇರೆಲ್ಲೂ ನಿಲ್ಲಿಸಬಾರದು. ರಿಕ್ಷಾ ಹಾಗೂ ಟಾಂ ಟಾಮ್ ವಾಹನಕ್ಕೆ ಸ್ಥಳ ನಿಗಡಿ ಪಡಿಸಿದಲ್ಲೇ ನಿಲುಗಡೆ ಮಾಡಬೇಕು. ಮುಖ್ಯ ರಸ್ತೆಯಲ್ಲಿ ಒಂದೇ ಒಂದು ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ ಮಾತನಾಡಿ, ಸಂಚಾರ ನಿಯಂತ್ರಣ ವಿಚಾರವನ್ನು ಅಭಿಯಾನ ರೀತಿಯಲ್ಲಿ ಕೆಲಸ ಮಾಡಿದಾಗ ಜನರಿಗೆ ಅರಿವು ಮೂಡಿಸಬಹುದು. ಪೊಲೀಸ್ ಇಲಾಖೆಯ ಸಹಕಾರದಲ್ಲಿ ನಾಲ್ಕು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧದ ಜಿಲ್ಲಾಧಿಕಾರಿಗಳ ಆದೇಶ ಸರಿಯಾಗಿ ಅನುಷ್ಠಾನವಾಗಬೇಕಾಗಿದ್ದು, ಸೋಮವಾರದಿಂದಲೇ ಜಾರಿಗೊಳಿಸಲಾಗುವುದು. ಇದಕ್ಕೆ ವಾಹನ ಚಾಲಕರು ಕಡ್ಡಾಯವಾಗಿ ಸಹಕಾರ ನೀಡಬೇಕು. ಸಾಧಕ ಬಾಧಕಗಳನ್ನು ಗಮನಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನವ ರಸ್ತೆಯನ್ನು ಅಂಚೆ ಕಛೇರಿ ಸಮೀಪದಿಂದ ನಾಲ್ಕು ಮಾರ್ಗ ಜಂಕ್ಷನ್ ವರೆಗೆ ಏಕಮುಖ ಸಂಚಾರ ರಸ್ತೆಯಾಗಿ ಮಾಡಲಾಗುತ್ತದೆ. ಅಡ್ಡದ ಬೀದಿಯಲ್ಲಿ ನಿಲ್ಲುವ ರಿಕ್ಷಾಗಳಿಂದಲೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಅದನ್ನು ಅಲ್ಲಿಂತ ತೆರವು ಮಾಡಲಾಗುವುದು. ಸಂತೆ ರಸ್ತೆಯಲ್ಲಿ ತಲಾ ಒಂದು ರಿಕ್ಷಾ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುವುದು.
ಕೋರಿಯರ್ ಸರ್ವಿಸ್ ನ ಲಾರಿಗಳು ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದ್ದು, ಬಸ್ ನಿಲ್ದಾಣದ ಒಳಗೆ ಬೆಳಗ್ಗೆ ೮ರವರೆಗೆ ಹಾಗೂ ರಾತ್ರಿ ೭ರ ಬಳಿಕ ಬರಬೇಕು. ರಿಕ್ಷಾಗಳೂ ನಿಲ್ದಾಣದ ಒಳಗೆ ನಿಗದಿಗಿಂತ ಹೆಚ್ಚು ಬರಬಾರದು. ಮುಖ್ಯ ರಸ್ತೆಯಲ್ಲಿ ಈಗಿನಂತೆ ರಿಕ್ಷಾ ನಿಲುಗಡೆಗೆ ಅವಕಾಶವಿಲ್ಲ. ನಿಗದಿ ಪಡಿಸಿದ ಸ್ಥಳಗಳಲ್ಲಿ ನಿಗದಿತ ಸಂಖ್ಯೆಯಲ್ಲೇ ಇರಬೇಕು.
ಬಸ್ ಗಳಿಗೂ ನಿಯಮ:
ಹಳೆ ಬಸ್ ನಿಲ್ದಾಣದಲ್ಲಿ ಬಸ್ ಗಳು ತುಂಬಿ ರಸ್ತೆಯಲ್ಲಿ ನಿಲ್ಲುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಖಾಸಗೀ ಬಸ್ ಗಳಿಗೂ ನಿಯಮ ಪಾಲನೆ ಸೂಚಿಸಲಾಗಿದೆ. ಒಂದು ಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣದಲ್ಲಿ ಒಂದೇ ಇರುವ ಜತೆಗೆ ಕೇವಲ ೧೫ ನಿಮಿಷ ಮಾತ್ರ ನಿಲ್ಲಬೇಕು. ಮುಖ್ಯ ರಸ್ತೆಯಲ್ಲಿ ಎಲ್ಲೂ ಬಸ್ ಗಳು ನಿಲ್ಲದೆ, ನಿಗದಿತ ನಿಲ್ದಾಣದ ಮುಂದೆಯೇ ನಿಲ್ಲಬೇಕು. ರಸ್ತೆಯಲ್ಲಿ ಬಸ್ ನಿಲ್ಲಿಸಿ ತಿಂಡಿ ತಿನ್ನುವುದಕ್ಕೆ ಚಾಲಕರು ಹೋಗುವಂತಿಲ್ಲ. ಕಟ್ಟು ನಿಟ್ಟಿನಲ್ಲಿ ನಿಯಮ ಪಾಲಿಸದೇ ಹೋದರೆ, ಬಸ್ ಚಾಲಕರ ವಿರುದ್ಧವೇ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಹಳೆ ಬಸ್ ನಿಲ್ದಾಣದ ಒಳಗೆ ದ್ವಿಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ಯಾಂಪ್ಕೋ ರಸ್ತೆಯಲ್ಲಿ ಸಂಪೂರ್ಣ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಮುಖ್ಯ ರಸ್ತೆಯ ಅಂಗಡಿಗಳ ಮುಂದೆ ಮಾಲೀಕರೂ ವಾಹನ ನಿಲ್ಲಿಸಬಾರದು. ಪ್ರಾರ್ಥನಾ ಮಂದಿರದ ಆಸುಪಾಸಿನಲ್ಲಿ ೧೦ಮೀ ವಾಹನ ನಿಲುಗಡೆ ಮಾಡಬಾರದು. ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಹೋಗುವ ವಾಹನ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನಗೌಡ, ವಿಟ್ಲ ಪೊಲೀಸ್ ಉಪ ನಿರೀಕ್ಷಕ ರತನ್ ಕುಮಾರ್, ಕೆಎಸ್ ಅರ್ ಟಿಸಿಯ ವಿಟ್ಲ ಟಿಸಿ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ವಾಹನಗಳ ಪ್ರಮುಖರು ಉಪಸ್ಥಿತರಿದ್ದರು.




