March 13, 2026

ವಿಟ್ಲ: ಕನ್ಯಾನದಲ್ಲಿ ಭೂಮಿ ಕಂಪಿಸಿದ ವದಂತಿ: ಹಳೇ ಕಟ್ಟಡದ ಗೋಡೆ ಕುಸಿದ ಪರಿಣಾಮ ಭೂಮಿ ಕಂಪಿಸಿದ ಅನುಭವ: ಕಂದಾಯ ಇಲಾಖೆಯ ಪರಿಶೀಲನೆ ವೇಳೆ ಬೆಳಕಿಗೆ

0
IMG-20250616-WA0015.jpg

ವಿಟ್ಲ: ಕನ್ಯಾನ ಗ್ರಾಮದ ಮಂಡ್ಯೂರು ಎಂಬಲ್ಲಿ ಭೂಮಿ ಕಂಪಿಸಿದ ವದಂತಿ ಹಬ್ಬಿದ್ದು, ಇದರಿಂದ ಆತಂಕ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಹಳೇ ಕಟ್ಟಡದ ಗೋಡೆ ಕುಸಿದು ಈ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ದೃಢಪಡಿಸಿದ್ದಾರೆ.

ಕನ್ಯಾನ-ಕರೋಪಾಡಿ ಗ್ರಾಮಗಳ ಗಡಿ ಭಾಗದ ಮಂಡ್ಯೂರು ಎಂಬಲ್ಲಿ ಮಧ್ಯಾಹ್ನ ವೇಳೆಗೆ ಭೂಮಿ ಕಂಪಿಸಿದೆ ಎಂಬ ಸುದ್ದಿ ಹರಡಿತ್ತು. ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ದ.ಕ ಜಿಲ್ಲಾ ಭೂ ವಿಜ್ಞಾನ ಅಧಿಕಾರಿಗಳು, ಬಂಟ್ವಾಳ ತಹಶೀಲ್ದಾರ್ ಮೊದಲಾದವರ ದಂಡು ಕನ್ಯಾನ ಭಾಗಕ್ಕೆ ಆಗಮಿಸಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕರೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆಯೊಂದರ ಹಳೇ ಕಟ್ಟಡದ ಗೋಡೆ ಕುಸಿದಿರುವುದು ಬೆಳಕಿಗೆ ಬಂದಿದೆ. ಇದರ ಶಬ್ದದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೂ ವಿಜ್ಞಾನ ಇಲಾಖೆಯ ದಾವೂದ್, ಬಂಟ್ವಾಳ ತಹಶೀಲ್ದಾರ್ ಅರ್ಚನ ಭಟ್, ಕಂದಾಯ ನಿರೀಕ್ಷಕ ರವಿ ಎಂ ಎನ್, ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕನ್ಯಾನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಬ್ದುಲ್ ಕರೀಮ್, ವಿಟ್ಲ ಠಾಣಾಧಿಕಾರಿ ರತನ್ ಕುಮಾರ್ ಮೊದಲಾದವರು ಭೇಟಿ ನೀಡಿದ್ದರು.
ಕೆಲವು ತಿಂಗಳ ಹಿಂದೆ ವಿಟ್ಲದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಪರಿಶೀಲಿಸಿದಾಗ ಮಾಡತ್ತಡ್ಕ ಎಂಬಲ್ಲಿರುವ ಕಲ್ಲಿನ ಕೋರೆಯಲ್ಲಿ ಸ್ಫೋಟಕ ದಾಸ್ತಾನು ಇರಿಸಿದ್ದ ಸ್ಥಳದಲ್ಲಿ ಸ್ಫೋಟ ಉಂಟಾಗಿ ಘಟನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಇದು ಕೂಡಾ ಅದೇ ರೀತಿ ಘಟನೆ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಅದಲ್ಲದೇ ಕರೋಪಾಡಿ ಗ್ರಾಮದಲ್ಲಿ ಬಾಕ್ಸೈಟ್ ಮಣ್ಣು ಅಗೆಯುವ ಕೆಲಸಗಳು ನಡೆಯುತ್ತಿದ್ದು, ಇದರಿಂದ ಈ ರೀತಿಯ ಘಟನೆ ನಡೆದಿದೆ ಎಂಬುದಾಗಿ ಭಾರೀ ವದಂತಿಗಳು ಹಬ್ಬಿತ್ತು.

Leave a Reply

Your email address will not be published. Required fields are marked *

error: Content is protected !!