ಕೇರಳದಲ್ಲಿ ಸಿಂಗಾಪುರದ ಕಂಟೈನರ್ ನಲ್ಲಿ ಬೆಂಕಿ ಅವಘಡ:58 ಗಂಟೆ ಕಳೆದರೂ ಬೆಂಕಿ ನಿಯಂತ್ರಣಕ್ಕೆ ಬಾರದ ಬೆಂಕಿ
ಮಂಗಳೂರು: ಕೇರಳದ ಕೋಯಿಕ್ಕೋಡ್‌ನ ಬೇಪೂರ್‌ನಿಂದ 70 ನಾಟೆಕಲ್ ಮೈಲು ದೂರದಲ್ಲಿ ಸಮುದ್ರದಲ್ಲಿ ಸಿಂಗಾಪುರದ ಕಂಟೈನರ್ ಹಡಗಿನಲ್ಲಿ ಅಗ್ನಿ
ದುರಂತ ಸಂಭವಿಸಿ 58 ಗಂಟೆ ಕಳೆದರೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿ ಯನ್ನು ಭಾರತೀಯ ನೌಕಾದಳ ರಕ್ಷಿಸಿ ಮಂಗಳೂರಿಗೆ ಕರೆ ತಂದಿದೆ. ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆರೋಗ್ಯ ಸ್ಥಿತಿ ಸ್ಥಿರ:
ಬೆಂಕಿಯಿಂದಾಗಿ ಗಂಭೀರವಾಗಿ ಗಾಯ ಗೊಂಡಿರುವ ಚೀನದ ಲೂ ಯಾನ್ಲಿ ಹಾಗೂ ಇಂಡೋನೇಷ್ಯಾದ ಸೋನಿಟ್ಯೂರ್ ಹೆನೈ ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನಾಲ್ಕೈದು ದಿನಗಳ ಕಾಲ ಐಸಿಯು ಚಿಕಿತ್ಸೆ ಅವಶ್ಯವಿದೆ. ಸಾಧಾರಣ ಗಾಯಗೊಂಡ ನಾಲ್ವರ ಪೈಕಿ ಒಬ್ಬರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದುವೈದ್ಯರು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೀಡಾದ ಹಡಗಿನಲ್ಲಿ 22 ಜನರ ಪೈಕಿ 14 ಮಂದಿ ಚೀನದವರಿದ್ದರು.
ಭಾರತದ ನೌಕಾದಳದ ಕಾರ್ಯಾಚರಣೆಗೆ ಚೀನದ ರಾಯಭಾರ ಕಚೇರಿ ವಕ್ತಾರರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.





