ವಿಜಯಪುರ: ತನ್ನೊಂದಿಗೆ ಮಾತನಾಡಲು ನಿರಾಕರಣೆ ಮಾಡುತ್ತಿದ್ದಾಳೆಂದು ಸಿಟ್ಟಾಗಿ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಸಿಬ್ಬಂದಿಯ ಹತ್ಯೆ
ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ತನ್ನೊಂದಿಗೆ ಮಾತನಾಡಲು ನಿರಾಕರಣೆ ಮಾಡುತ್ತಿದ್ದಾಳೆಂದು ಸಿಟ್ಟಾದ ಯುವಕ ಆಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಇಂಡಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಘಟನೆ ನಡೆದಿದೆ.
ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದ ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಕೊಲೆಯಾದ ಮಹಿಳೆ. ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಸಂಜು ಬನಸೋಡೆ ಕೊಲೆ ಮಾಡಿದ ಆರೋಪಿ.
ರೇಣುಕಾ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ರೇಣುಕಾ ಬುಧವಾರ (ಜೂ.11) ಕೊಟ್ನಾಳ ಗ್ರಾಮದಿಂದ ಬಸ್ ಮೂಲಕ ಬಂದಿಳಿದ್ದರು. ಈ ವೇಳೆ ಬೈಕ್ ನಲ್ಲಿ ಆಗಮಿಸಿದ ಸಂಜು ಬನಸೋಡೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಣುಕಾ ಅವರನ್ನು ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೇಣುಕಾ ಕನ್ನೊಳ್ಳಿ ಮೃತಪಟ್ಟಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.





