ಶಾಸಕ ಜನಾರ್ದನ ರೆಡ್ಡಿಗೆ ತಾತ್ಕಾಲಿಕ ರಿಲೀಫ್ ನೀಡಿದ ವಿಶೇಷ ಸಿಬಿಐ ನ್ಯಾಯಾಲಯ: ಷರತ್ತು ಬದ್ಧ ಜಾಮೀನು ಮಂಜೂರು
ಹೈದರಾಬಾದ್: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ವಿಶೇಷ ಸಿಬಿಐ ನ್ಯಾಯಾಲಯ ಇತ್ತೀಚೆಗೆ ವಿಧಿಸಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಈ ಹಂತದಲ್ಲಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ಜಾಮೀನು ನೀಡಿದೆ.
ತಲಾ 10 ಲಕ್ಷ ಮೌಲ್ಯದ ಇಬ್ಬರು ಶ್ಯೂರಿಟಿಗಳು, ಭಾರತ ಬಿಟ್ಟು ಹೋಗಲು ತಡೆ ವಿಧಿಸಿ ಜನಾರ್ದನ ರೆಡ್ಡಿ ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆಯೂ ಕೋರ್ಟ್ ಆದೇಶ ನೀಡಿದೆ.
ಕಳೆದ ತಿಂಗಳು (ಮೇ 6) ಓಬಳಾಪುರಂ ಮೈನಿಂಗ್ ಕಂಪನಿಗೆ ಸಂಬಂಧಿಸಿದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ಅಂತಿಮ ತೀರ್ಪು ನೀಡಿ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು.ಜನಾರ್ದನ ರೆಡ್ಡಿ ಜತೆಗೆ, ಶ್ರೀನಿವಾಸ್ ರೆಡ್ಡಿ, ವಿ.ಡಿ. ರಾಜಗೋಪಾಲ್ ಮತ್ತು ಅಲಿ ಖಾನ್ ಕೂಡ ತಪ್ಪಿತಸ್ಥರೆಂದು ಸಾಬೀತಾಗಿತ್ತು. ತೀರ್ಪು ಪ್ರಶ್ನಿಸಿ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಾದಗಳನ್ನು ಮಂಗಳವಾರ ಆಲಿಸಿದ್ದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಅವರು ಸಿಬಿಐ ನ್ಯಾಯಾಲಯದ ತೀರ್ಪನ್ನು ತಾತ್ಕಾಲಿಕವಾಗಿ ತಡೆಹಿಡಿದು ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಿ ತೀರ್ಪು ನೀಡಿದ್ದಾರೆ.
ಜನಾರ್ದನ ರೆಡ್ಡಿ ಜೈಲು ಶಿಕ್ಷೆಗೆ ಒಳಗಾಗಿ ತೆಲಂಗಾಣದ ಚಂಚಲಗುಡ ಜೈಲು ಸೇರಿದ್ದರು. ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯಕ್ಕೆ ಗಂಗಾವತಿ ಕ್ಷೇತ್ರಕ್ಕೆ ಉಪಚುನಾವಣೆ ಸಾಧ್ಯತೆ ದೂರವಾಗಿದೆ.
ರೆಡ್ಡಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪತಿ ಬಿಡುಗಡೆಗಾಗಿ ಪತ್ನಿ ಅರುಣಾ ಲಕ್ಷ್ಮೀ ರಾಜ್ಯದ ವಿವಿಧ ದೇವಸ್ಥಾನ ಗಳಿಗೆ ಭೇಟಿ ನೀಡಿ ಪೂಜೆ ನೆರವೇರಿಸಿದ್ದರು.




