ವಿಟ್ಲ: ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ತಾಯಿಯ ಹೆಸರಿನಲ್ಲಿ ಗಿಡನೆಟ್ಟು ಪರಿಸರ ಉಳಿಸೋಣ: ವಲಯ ಅರಣ್ಯಾಧಿಕಾರಿ ವೀರಣ್ಣ
ವಿಟ್ಲ ಬಸವನಗುಡಿ ಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಮುಖ್ಯ ಅತಿಥಿಗಳಾದ ವಲಯ ಅರಣ್ಯಾಧಿಕಾರಿ ವೀರಣ್ಣರವರು “ವಿಶ್ವ ಪರಿಸರ ದಿನ 1974ರಲ್ಲಿ ವಿಶ್ವಸಂಸ್ಥೆಯಲ್ಲಿ ಆಚರಿಸಲ್ಪಡುತ್ತದೆ. ಸರಕಾರವು ನೀರಿಗಾಗಿ ಅರಣ್ಯ, ಬೀಜದ ಉಂಡೆ ಬಿತ್ತನೆಯಂತಹ ಹಲವಾರು ಯೋಜನೆಗಳನ್ನು ಪ್ರತಿವರ್ಷ ಆಯೋಜಿಸಿ, ಪರಿಸರ ಜಾಗೃತಿ ಸಾರುತ್ತಿದೆ. ಈ ವರ್ಷ ಪ್ರಧಾನಿ ಮೋದಿಯವರ ” ತಾಯಿಯ ಹೆಸರಿನಲ್ಲಿ ಗಿಡ ” ಎಂಬ ಯೋಜನೆ ಪರಿಸರ ಕಾಳಜಿ ಹೆಚ್ಚಿಸುತ್ತಿದೆ ಎಂದರು

.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ಶ್ರೀಪ್ರಕಾಶ್ ಕುಕ್ಕಿಲ ರವರು ಪರಿಸರವನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಿ ನೀಡೋಣ ಎಂದು ಪ್ರಕೃತಿಯ ಉಳಿವಿನ ಬಗೆಗೆ ಮಾತನಾಡಿದರು. ಸಂಸ್ಥೆಯ ಹಿರಿಯ ನಿರ್ದೇಶಕರಾದ ಶ್ರೀ ಹಸನ್ ವಿಟ್ಲ ಮಾತನಾಡುತ್ತಾ ಮಕ್ಕಳಲ್ಲಿ ಪ್ರಕೃತಿ ಎಂದರೇನು? ಅದರ ಮಹತ್ವವೇನು? ಎಂಬುದನ್ನು ತಿಳಿ ಹೇಳಿದರು. ವಲಯ ಅರಣ್ಯಾಧಿಕಾರಿಗಳಾದ ಸತೀಶ್, ಶಾಲಾ ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಧಿಕಾರಿಗಳಾದ ಶ್ರೀ ರಾಧಾಕೃಷ್ಣ ಎರುಂಬು ವಂದಿಸಿದರು. ಸ್ಕೌಟ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ಹಾಗೂ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಂಚಲಾಯಿತು. ಗೈಡ್ಸ್ ವಿದ್ಯಾರ್ಥಿನಿಯರು ಪರಿಸರ ಗೀತೆಯನ್ನು ಹಾಡಿದರು. ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ತರಬೇತುದಾರರಾದ ಶ್ರೀಮತಿ ಜಯಶ್ರೀ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.




