March 13, 2026

RCB ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣ: ಉಪ್ಪಿನಂಗಡಿಯ ಯುವತಿ ಮೃತ್ಯು

0
image_editor_output_image335872527-1749097037047

ಉಪ್ಪಿನಂಗಡಿ: 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದು ಉಪ್ಪಿನಂಗಡಿ ಇಳಂತಿಲ ಮೂಲದ ಓರ್ವ ಯುವತಿಯೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಉದ್ಯಮಿಯಾಗಿರುವ ಇಳಂತಿಲ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ಮಯಿ ಶೆಟ್ಟಿ(20) ಕಾಲ್ತುಳಿತದಿಂದ ಸಾವಿಗೀಡಾಗಿದವರು ಎಂದು ತಿಳಿದು ಬಂದಿದೆ.

18 ವರ್ಷದ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಗಳೂರಿನಲ್ಲಿ ಅಭಿಮಾನಿಗಳು ಬರಮಾಡಿಕೊಂಡಾಗ, ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದರು.

ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಚಿನ್ಮಯಿ ಶೆಟ್ಟಿಯವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನಪ್ಪಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ ಶೆಟ್ಟಿ ಅವರು ಅತ್ಯುತ್ತಮ ಯಕ್ಷಗಾನ ಕಲಾವಿದೆಯೂ ಆಗಿದ್ದರು.

ಇವರು ಬೆಂಗಳೂರಿನ ಯಕ್ಷತರಂಗ ತಂಡದ ವಿದ್ಯಾರ್ಥಿನಿಯಾಗಿದ್ದರು. ಚಿನ್ಮಯಿ ಶೆಟ್ಟಿಯವರ ತಂದೆ ಕರುಣಾಕರ ಶೆಟ್ಟಿಯವರು ಮೂಲತ: ಸೋಮವಾರಪೇಟೆ ನಿವಾಸಿಯಾಗಿದ್ದು ಕೆಲವರ್ಷಗಳ ಹಿಂದೆ ಇಳಂತಿಲದಲ್ಲಿ ಜಾಗ ಖರೀದಿಸಿ ಮನೆ ಮಾಡಿದ್ದರು.

ಬೆಂಗಳೂರುನಲ್ಲಿ ಉದ್ಯಮಿಯಾಗಿರುವ ಕರುಣಾಕರ ಶೆಟ್ಟಿಯವರು ಕುಟುಂಬದೊಂದಿಗೆ ಬೆಂಗಳೂರುನಲ್ಲಿಯೇ ವಾಸ್ತವ್ಯವಿದ್ದು, ಅಂಡೆತ್ತಡ್ಕದಲ್ಲಿ ಅವರ ತಾಯಿ ಮತ್ತು ಮಗಳ ಮಗ ವಾಸ್ತವ್ಯವಿದ್ದಾರೆ. ವಿಷಯ ತಿಳಿದು ಅವರು ಬೆಂಗಳೂರುಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!