ಮಂಗಳೂರು: ನೂತನ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ: ದ.ಕ ಎಸ್ಪಿಯಾಗಿ ಡಾ. ಅರುಣ್ ಕೆ ನೇಮಕ
ಮಂಗಳೂರು: ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಎಸ್ಪಿಯಾಗಿ ಡಾ.ಅರುಣ್ ಕೆ. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಸುಧೀರ್ ಕುಮಾರ್ ರೆಡ್ಡಿ ಇದುವರೆಗೂ ಬೇಹುಗಾರಿಕಾ ಇಲಾಖೆಯ ಡಿ ಐ ಜಿ ಆಗಿದ್ದರು. ಅವರು ವರ್ಗಾವಣೆಯಾಗಿರುವ ಅನುಪಮ್ ಅಗ್ರವಾಲ್ ಅವರ ಸ್ಥಾನಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಉಡುಪಿ ಎಸ್ಪಿಯಾದ್ದ ಡಾ.ಅರುಣ್ ಕೆ. ಅವರು ವರ್ಗಾವಣೆಯಾಗಿರುವ ಯತೀಶ್ ಎನ್. ಅವರ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಸುಧೀರ್ ಕುಮಾರ್ ರೆಡ್ಡಿ:
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಾರಾವ್ ಪೇಟೆಯವರಾದ ಸುಧೀರ್ ಕುಮಾರ್ ರೆಡ್ಡಿ 2010 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಪುದುಚೇರಿ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಹಿಂದೆ ಬೀದರ್ ಮತ್ತು ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ ಕರ್ನಾಟಕ ಕೇಡರ್ ನಿಂದ ಆಂಧ್ರಪ್ರದೇಶ ಕೇಡರ್ ಗೆ ಡೆಪ್ಟೇಷನ್ ಮೇಲೆ ತೆರಳಿದ್ದ ಅವರು ಮೊದಲು ವಿಜಯವಾಡ, ನಂತರ ಕರ್ನೂಲ್ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಎಸ್‌ಪಿಯಾಗಿ, ನಂತರ ಪೂರ್ವ ಗೋದಾವರಿ ಜಿಲ್ಲೆ ಉಸ್ತುವಾರಿ, ಬಳಿಕ ಪೂರ್ಣಾವಧಿ ಎಸ್‌ಪಿಯಾಗಿ ಕೆಲಸ ಮಾಡಿದ್ದರು.




