March 12, 2026

ಮಂಗಳೂರು: ಬಸ್‌ ಮೇಲೆ ಕಲ್ಲು ತೂರಾಟ

0
image_editor_output_image-18938205-1746153918700.jpg

ಮಂಗಳೂರು:‌ ಬಜಪೆಯ ಕಿನ್ನಿಪದವಿನಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಓಡಿಸಿದರೆ ನಮಗೂ ತೊಂದರೆಯಾಗಬಹುದು. ಈಗಾಗಲೇ ಬಸ್ ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇವತ್ತು ಇಡೀ ದಿನ ಬಸ್ ಬಂದ್ ಇರುತ್ತದೆ ಎಂದು ಖಾಸಗಿ ಬಸ್ ಚಾಲಕರು ತಿಳಿಸಿದ್ದಾರೆ. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯುತ್ತಿದೆ. ಮತ್ತೊಂದೆಡೆ, ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!