March 12, 2026

ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ: ಕರಾವಳಿ ಪ್ರವಾಸಿತಾಣಗಳಲ್ಲಿ ಭಾರೀ ಕಟ್ಟೆಚ್ಚರ

0
image_editor_output_image-1746717318-1746086363895

ಕಾರವಾರ: ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ದೇಶದಲ್ಲಿ ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಗಳಾಗುತ್ತಿವೆ. ದೇಶದ ಸುರಕ್ಷತೆಯ ವಿಚಾರವಾಗಿ ಭಾರಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್, ನೌಕಾ ನೆಲೆ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಸಕ್ರಿಯರಾಗಿದ್ದಾರೆ. ಒಂದು ಕಡೆ ಅರಬ್ಬೀ ಸಮುದ್ರ, ಇನ್ನೊಂದು ಕಡೆ ದೇಶದ ದೊಡ್ಡ ನೌಕಾ ನೆಲೆ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವ ದೇಶ ವಿದೇಶಿಗರು. ಈ ಎಲ್ಲ ಸೂಕ್ಷ್ಮ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಾದಳಕ್ಕೆ ಹೋಗುವ ಮೀನುಗಾರಿಕೆ ಬೋಟ್ ಹಾಗೂ ಹಡಗುಗಳ ಮೇಲೆ ಕಣ್ಣಿಡಲಾಗಿದ್ದು, ಕರಾವಳಿ ಕಾವಲು ಪಡೆ ಹಾಗೂ ಭಾರತಿಯ ಕೊಸ್ಟಲ್ ಗಾರ್ಡ್ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗಿ ಪ್ರತಿಯೊಂದು ಬೋಟ್​​ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಬಂದರುಗಳಿಗೆ ಬರುವ ಪ್ರತಿಯೋಂದು ಪರ್ಷಿಯನ್ ಬೋಟ್​​ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಂದರು ಹಾಗೂ ಸಮುದ್ರದಾಳದಲ್ಲಿ ಯಾವುದೇ ಅನುಮಾನಸ್ಪದ ಹಾಗೂ ಬೇರೆ ಕಡೆಯ ಬೋಟ್ ಕಂಡು ಬಂದರೆ ತಕ್ಷಣ ಮಾಹಿತಿ ತಿಳಿಸುವಂತೆ ಮೀನುಗಾರರಿಗೆ ಪೊಲೀಸರ ತಂಡ ಮನವಿ ಮಾಡಿಕೊಂಡಿದೆ.

ದೇಶದ ಅತಿ ದೊಡ್ಡ ಕದಂಬ ನೌಕಾ ನೆಲೆ ಕಾರವಾರ ಬಳಿ ಇದೆ. ಹೀಗಾಗಿ ಕಾರವಾರ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬರುವ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೌಕಾನೆಲೆ ಭದ್ರತೆ ವಿಚಾರವಾಗಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಪ್ರಕಾರ, ನೌಕಾನೆಲೆಯ ಕೂಗಳತೆ ದೂರದಲ್ಲಿನ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಮೇ 4 ರಂದು ನಡೆಯಬೇಕಿದ್ದ ಪ್ರಸಿದ್ಧ ಕರಾವಳಿ ಉತ್ಸವವನ್ನು ಮುಂದೂಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!