December 20, 2025

ಬ್ಲಾಕ್ ಮೇಲ್ ಮಾಡಿದ ಯುವಕನ ಕೊಲೆ ಪ್ರಕರಣ:
10ನೇ ತರಗತಿಯ ಇಬ್ಬರು ಬಾಲಕಿಯರ ಬಂಧನ

0
handcuff-4-10.jpg

ಚೆನ್ನೈ: ಖಾಸಗಿ ಫೋಟೋಗಳನ್ನು ತೋರಿಸಿ ತಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಿರುವಳ್ಳೂರ್ ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ, ಒಂದು ಜಾಗದಲ್ಲಿ ಶವ ಹೂತಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕೊಲೆಯಾದವನ ಮೊಬೈಲ್ ಕೂಡ ಪೊಲೀಸರಿಗೆ ಸಿಕ್ಕಿದೆ.

ಆತ ಪರಸ್ಪರ ಬಾಲಕಿಯರಿಗೆ ತಿಳಿಯದಂತೆ ಇಬ್ಬರೊಂದಿಗೂ ಸಂಬಂಧ ಹೊಂದಿದ್ದ. ಬಾಲಕಿಯರ ಜೊತೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಕೊಂಡು, ಅವರನ್ನು ಬ್ಲಾಕ್ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದ. ಇಬ್ಬರಿಂದಲೂ 50 ಸಾವಿರ ರೂ. ಸುಲಿಗೆ ಮಾಡಿದ್ದ ಎಂಬ ಮಾಹಿತಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ ಬೇಡಿಕೆಯಿಟ್ಟಿದ್ದ ಹಣವನ್ನು ಒದಗಿಸಲು ವಿದ್ಯಾರ್ಥಿನಿಯರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮತ್ತೊಬ್ಬ ಯುವಕ ಅಶೋಕ್ ನೊಂದಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅಶೋಕ್ ನೀಡಿದ ಸಲಹೆ ಮೇರೆಗೆ ಪ್ರೇಮ್ ಕುಮಾರ್ ಗೆ ಕರೆ ಮಾಡಿ ಶೋಲವರಮ್ ಟೋಲ್ ಪ್ಲಾಜಾ ಬಳಿಗೆ ಬಾಲಕಿಯರು ಕರೆಸಿಕೊಂಡಿದ್ದಾರೆ.

ಪ್ರೇಮ್ ಕುಮಾರ್ ನನ್ನು ಅಪಹರಿಸಿ ಮೊಬೈಲ್ ನಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡುವಂತೆ ಬಾಲಕಿಯರು ಕೇಳಿದ್ದಾರೆ. ನಂತರ ಅಶೋಕ್ ಮತ್ತು ಆತನ ಸ್ನೇಹಿತರೊಂದಿಗೆ ಪ್ರೇಮ್ ಕುಮಾರ್ ನನ್ನು ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ, ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!