ಮಂಗಳೂರು: ಗುಂಪು ಹತ್ಯೆಯಾದ ಅಶ್ರಫ್ ಮಲಪ್ಪುರಂ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ಎ.27ರಂದು 30ಕ್ಕೂ ಅಧಿಕ ಮಂದಿಯ ಗುಂಪೊಂದು ಥಳಿಸಿ ಹತ್ಯೆಯಾದ ಕೇರಳದ ಯುವಕ ಅಶ್ರಫ್ ಅವರ ಅಂತ್ಯಸಂಸ್ಕಾರವು ಮಲಪ್ಪುರಂ ಜಿಲ್ಲೆಯಲ್ಲಿ ನಡೆಸಲಾಯಿತು.
ಅಶ್ರಫ್ ಮೃತದೇಹ ಮನೆ ತುಲುಪುತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಗನ ಮೃತದೇಹ ಊರಿಗೆ ತಲುಪುತ್ತಿದ್ದಂತೆಯೇ ಆ್ಯಂಬುಲೆನ್ಸ್ ನಲ್ಲಿದ್ದ ಮಗನ ಮೃತದೇಹವನ್ನು ವೀಕ್ಷಿಸಿದ ತಾಯಿ ರುಕಿಯಾ ಅವರು, ಕಣ್ಣೀರಿಟ್ಟು ಮಗನ ಹಣೆಗೆ ಮುತ್ತಿಟ್ಟು, ಬೀಳ್ಕೊಟ್ಟರು.
ಗುಂಪಿನಿಂದ ಹತ್ಯೆಯಾಗಿದ್ದ ವ್ಯಕ್ತಿಯನ್ನು ಮೊದಲು ಅಪರಿಚಿತ ಎಂದು ಕಂಡುಬಂದಿತ್ತು. ಆ ಬಳಿಕ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮುಹಮ್ಮದ್ ಅಶ್ರಫ್(38) ಎಂದು ಗುರುತಿಸಲಾಗಿತ್ತು. ಮಂಗಳವಾರ ರಾತ್ರಿ ಅಶ್ರಫ್ ಅವರ ಸಹೋದರ ಜಬ್ಬಾರ್ ಅವರು ಮಂಗಳೂರಿಗೆ ಆಗಮಿಸಿದ ಬಳಿಕ ಮೃತದೇಹವನ್ನು ಮಂಗಳೂರಿನ ಕೇಂದ್ರ ಜುಮಾ ಮಸೀದಿಯಾದ ಝೀನತ್ ಭಕ್ಷ್ ಮಸೀದಿಯಲ್ಲಿ ಸ್ನಾನ ಮಾಡಿಸಿ, ಆ್ಯಂಬುಲೆನ್ಸ್ ಮೂಲಕ ಕೇರಳಕ್ಕೆ ಕೊಂಡೊಯ್ಯಲಾಗಿತ್ತು.
ಸದ್ಯ ಅಶ್ರಫ್ ಅವರ ಕುಟುಂಬವು ಮಲಪ್ಪುರಂ ಜಿಲ್ಲೆಯ ಚೋಲಕ್ಕುಂಡು ಎಂಬಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಸಮೀಪದ ಮಸೀದಿಯಲ್ಲಿ ಅಂತ್ಯಸಂಸ್ಕಾರವನ್ನು ನೆರೆವೇರಿಸಲಾಗಿದೆ.





