ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಮೂವರು ಆರೋಪಿಗಳ ಬಂಧನ
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣಕಕ್ಕೆ ಸಂಬಂಧಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಸಂಜು ಗುರವ್, ಸಚಿನ್ ಗುರವ್, ಗಣೇಶ ಪೆಡ್ನೇಕರ್ ಎಂಬುವವರು ಬಂಧಿತ ಆರೋಪಿಗಳು. ಮೊನ್ನೆ ರಾತ್ರಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ನಂತರ ಧ್ವಜ ಕಟ್ಟೆಗೆ ಮಸಿ ಬಳಿದು ವಿಕೃತಿ ಮೆರೆದಿದ್ದರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 153A, 295, 427, 120Bರಡಿ ಕೇಸ್ ದಾಖಲಾಗಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದನ್ನು ವಿರೋಧಿಸಿ ನಿನ್ನೆ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಎಮ್‌ಇಎಸ್ ಸಂಘಟನೆ ನಿಷೇಧಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಎಮ್‌ಇಎಸ್ ಮತ್ತು ಶಿವಸೇನೆ ಸಂಘಟನೆ ವಿರುದ್ಧ ಕನ್ನಡಿಗರ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಜಿಲ್ಲೆಯ ಖಾನಾಪುರ ತಾಲೂಕಿನ ಹಲಶಿ ಗ್ರಾಮದಲ್ಲಿ ಆರೋಪಿಗಳು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದರು.
ಬೆಳಗಾವಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿದ್ದ ಕನ್ನಡ ಬಾವುಟಕ್ಕೆ ಆರೋಪಿಗಳು ಬೆಂಕಿ ಹಚ್ಚಿದ್ದರು. ರಾತ್ರಿ ಬೆಂಕಿ ಹಚ್ಚಿ, ಧ್ವಜಕಟ್ಟೆಯ ಮೇಲಿನ ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ಕಪ್ಪು ಮಸಿ ಬಳಿದು ವಿಕೃತ ಮೆರೆದಿದ್ದರು. ನಿನ್ನೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





