ಮಂಗಳೂರು: ಸ್ಕೂಟರ್ ಗೆ ಅಡ್ಡ ಬಂದ ಕಾಡು ಹಂದಿ: ಸ್ಕೂಟರ್ ಹಿಂಬದಿಯಲ್ಲಿದ್ದ ವೃದ್ದೆ ರಸ್ತೆಗೆ ಬಿದ್ದು ಸಾವು

ಮಂಗಳೂರು: ಕಾಡು ಹಂದಿಯೊಂದು ಏಕಾಏಕಿ ಸ್ಕೂಟರ್ ಗೆ ಅಡ್ಡ ಬಂದ ಪರಿಣಾಮ ಸ್ಕೂಟರ್ ನಲ್ಲಿದ್ದ ವೃದ್ದೆಯೊಬ್ಬರು ರಸ್ತೆಗೆಸೆಯಲ್ಪಟ್ಟು ಸಾವನಪ್ಪಿದ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ಕಳೆದ ಶನಿವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ದೇವಕಿ ಮಾಣೈ(72) ಎಂದು ಗುರುತಿಸಲಾಗಿದೆ. ವರದರಾಜ್ ಮಾಣೈ ಅವರು ತನ್ನ ತಾಯಿ ದೇವಕಿ ಮಾಣೈ ಅವರನ್ನ ಶನಿವಾರ ರಾತ್ರಿ ಬಜಾಲಿನ ಸಂಬಂಧಿಕರ ಮನೆಯಿಂದ ಸ್ಕೂಟರಿನಲ್ಲಿ ಕುಳ್ಳಿರಿಸಿ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮಧ್ಯದ ಖಂಡಿಗ ಎಂಬಲ್ಲಿ ಹಳೇ ಪಂಚಾಯತ್ ಕಚೇರಿ ಕಟ್ಟಡದ ಬಳಿಯ ಗುಡ್ಡ ಪ್ರದೇಶದಿಂದ ಕಾಡು ಹಂದಿ ದಿಢೀರ್ ಆಗಿ ರಸ್ತೆ ಕಡೆ ಧಾವಿಸಿತ್ತು.
ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ವಿಚಲಿತರಾಗಿ ಹಠಾತ್ತನೆ ಬ್ರೇಕ್ ಹೊಡೆದ ಪರಿಣಾಮ ತಾಯಿ ಮತ್ತು ಮಗ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡ ದೇವಕಿ ಅವರಿಗೆ ಹರೇಕಳದ ಕ್ಲಿನಿಕ್ ಒಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.