ಖೋಟಾ ನೋಟಿನ ಜಾಲ ಪತ್ತೆ: ಎಎಸ್‌ಐ ಸೇರಿದಂತೆ ನಾಲ್ವರು ಆರೋಪಿಗಳ ಬಂಧನ

ರಾಯಚೂರು: ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆಯಾಗಿದ್ದು, ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎಎಸ್‌ಐ ಮರಿಲಿಂಗ, ಸದ್ದಾಂ, ರಮೇಶ್ ಮತ್ತು ಶಿವಲಿಂಗ ಎಂದು ಗುರುತಿಸಲಾಗಿದೆ. ನಗರದ ಶಾಂತಿ ಕಾಲೋನಿಯ ಸದ್ದಾಂನ ಮನೆಯನ್ನು ಬಾಡಿಗೆ ಪಡೆದಿದ್ದ ಮರಿಲಿಂಗ ಅಲ್ಲಿಂದಲೇ ದಂಧೆ ನಡೆಸುತ್ತಿದ್ದ. ಈ ವಿಚಾರ ತಿಳಿದು ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನ ಕಿಂಗ್ಪಿನ್ ಒಬ್ಬನ ಮಾತಿನಂತೆ ಮರಿಲಿಂಗ ಟೀಂ ಈ ದಂಧೆಯನ್ನು ಮಾಡುತ್ತಿತ್ತು. ಇನ್ನೂ ಗ್ಯಾಂಗ್ ಸದ್ದಾಂನಿಂದ 10 ಲಕ್ಷ ರೂ. ಹಣ ಪಡೆದು 30 ಲಕ್ಷ ರೂ. ಖೋಟಾ ನೋಟು ನೀಡುವ ವ್ಯವಹಾರ ಕುದುರಿತ್ತು. ಮೊದಲ ಹಂತವಾಗಿ ಸದ್ದಾಂ 4 ಲಕ್ಷ ರೂ. ನೀಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.