ಇಬ್ಬರು ಹೆಣ್ಣುಮಕ್ಕಳ ಜತೆ ತಾಯಿ ಆತ್ಮಹತ್ಯೆ

ಕೇರಳ: ಪತಿಯೊಂದಿಗೆ ದೂರವಾಣಿ ಕರೆಯಲ್ಲಿ ಕೆಲ ನಿಮಿಷಗಳ ಕಾಲ ಮಾತನಾಡಿದ ಬೆನ್ನಲ್ಲೇ ತನ್ನಿಬ್ಬರ ಹೆಣ್ಣುಮಕ್ಕಳ ಜತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ವರದಿಯಾಗಿದೆ.
ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಮಹಿಳೆ, ತನ್ನೊಂದಿಗೆ ತನ್ನ ಮಕ್ಕಳ ಪ್ರಾಣವನ್ನು ಕಸಿದುಕೊಂಡಿದ್ದಾರೆ. ಈ ಭೀಕರ ಘಟನೆ ಹಿಂದಿರುವ ಕಾರಣವೇನು ಎಂದು ತನಿಖೆ ಕೈಗೊಂಡ ಪೊಲೀಸರಿಗೆ ಆರಂಭದಲ್ಲೇ ಪತಿಯ ಮೇಲೆ ಅನುಮಾನ ಮೂಡಿತ್ತು. ಇದೀಗ ವಿಚಾರಣೆ ಬಳಿಕ ಆತ ಆಡಿದ ಮಾತುಗಳೇನು ಎಂಬುದು ಸ್ಪಷ್ಟವಾಗಿದೆ.
ರೈಲಿನ ಮುಂದೆ ಜಿಗಿದು ತನ್ನ ಮಕ್ಕಳೊಂದಿಗೆ ದುರಂತ ಅಂತ್ಯ ಕಂಡ ಮಹಿಳೆ ಶೈನಿ, ತಾನು ಎದುರಿಸುತ್ತಿದ್ದ ಕಠಿಣ ಪರಿಸ್ಥಿತಿ ಮತ್ತು ಮನೆಯಲ್ಲಿದ್ದ ಸವಾಲುಗಳನ್ನು ಕರಿಂಕುನ್ನಂ ಕುಟುಂಬಶ್ರೀ ಅಧ್ಯಕ್ಷೆ ಉಷಾ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮನಬಿಚ್ಚಿ ಹಂಚಿಕೊಂಡಿದ್ದರು. ಇವರಿಬ್ಬರ ನಡುವಿನ ಫೋನ್ ಸಂಭಾಷಣೆಯನ್ನು ಹೊರತೆಗೆದ ಖಾಕಿ ಪಡೆಗೆ, ಶೈನಿ ಸಾವಿನ ಹಿಂದೆ ಸಾಲದ ಶೂಲವಿತ್ತು ಎಂಬುದು ಗೊತ್ತಾಗಿದೆ. ಆರ್ಥಿಕ ತೊಂದರೆಗಳ ಜತೆ ಜತೆಗೆ ಪತಿಯ ಅವಾಚ್ಯ ಪದಗಳ ಬಳಕೆ, ನಿಂದನೆ ಆಕೆಯ ಸಾವಿಗೆ ಕಾರಣ ಎಂಬುದು ಬಹಿರಂಗಗೊಂಡಿದೆ.