ಪುತ್ತೂರು | ಮುಕ್ರಂಪಾಡಿಯಲ್ಲಿ ಪಿಕಪ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಪುತ್ತೂರು: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಮಾ. 6 ರಂದು ಸಂಭವಿಸಿದೆ.
ಪಂಜ ಕೂತ್ಕುಂಜ ಗ್ರಾಮದ ಸಂಪ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ (76) ಮೃತರು. ಅವರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕಾರ್ಯನಿಮಿತ್ತ ಕೃಷ್ಣ ಭಟ್ ಅವರು ಪಂಜದಿಂದ ಪುತ್ತೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪಿಕಪ್ ಢಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದು, ಪಿಕಪ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಾರ್ವಜನಿಕರು ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದು, ತಲೆಗೆ ತೀವ್ರ ಗಾಯವಾದ ಹಿನ್ನೆಲೆಯಲ್ಲಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ.




