ವಿಟ್ಲ: ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವ್ಯಕ್ತಿ ಮೇಲೆ ನಾಯಿ ದಾಳಿ
ವಿಟ್ಲ: ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ವೃದ್ಧರೊಬ್ಬರ ಮೇಲೆ ಸಾಕು ನಾಯಿ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ನಡೆದಿದೆ.
ಕರೋಪ್ಪಾಡಿ ಗ್ರಾಮದ ಲಕ್ಷ್ಮಣ ಎಂಬವರು ಯಾವುದೊ ವಿಚಾರಕ್ಕೆ ಠಾಣೆಗೆ ದೂರು ನೀಡಲು ತೆರಳಿದ್ದರು. ಈ ಸಂದರ್ಭ ಠಾಣೆಯ ಮುಂಭಾಗ ಇದ್ದ ನಾಯಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಇದರಿಂದ ಅವರ ಕಾಲಿನ ಮೂರು ಕಡೆ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಅವರು ಠಾಣೆಯಿಂದ ಬಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ನಾಯಿ ಕಳೆದ ಹಲವಾರು ಸಮಯಗಳಿಂದ ಠಾಣೆಯಲ್ಲಿ ಬೀಡುಬಿಟ್ಟಿದ್ದು, ಕೆಲವು ದಿನಗಳ ಹಿಂದೆ ಇದೇ ರೀತಿಯಾಗಿ ನಾಯಿ ಠಾಣೆಗೆ ಬಂದವರ ಮೇಲೆ ದಾಳಿ ನಡೆಸಿದೆ.




