April 3, 2025

ಕೇರಳ: ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಘರ್ಷಣೆ: 10ನೇ ತರಗತಿ ವಿದ್ಯಾರ್ಥಿ ಮೃತ್ಯು

0

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್‌ನಲ್ಲಿ ಖಾಸಗಿ ಟ್ಯೂಷನ್ ಸೆಂಟರ್‌ವೊಂದರ ಬಳಿ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ 10ನೇ ತರಗತಿಯ ವಿದ್ಯಾರ್ಥಿಯೋರ್ವ ಶನಿವಾರ ಮುಂಜಾನೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಹಮ್ಮದ್ ಶಹಬಾಝ್‌(16) ಮೃತ ವಿದ್ಯಾರ್ಥಿ. ಶಹಬಾಝ್‌ ಕೋಝಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಫೆಬ್ರವರಿ 23ರಂದು ತಾಮರಸ್ಸೆರಿಯ ಟ್ಯೂಷನ್ ಸೆಂಟರ್‌ನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ಇದೇ ವಿಚಾರಕ್ಕೆ ಗುರುವಾರ ವಿದ್ಯಾರ್ಥಿಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಮುಹಮ್ಮದ್ ಶಹಬಾಝ್ ಗಂಭೀರವಾಗಿ ಗಾಯಗೊಂಡಿದ್ದ. ಆರಂಭದಲ್ಲಿ ಶಹಬಾಸ್‌ಗೆ ತಾಮರಸ್ಸೆರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮನೆಗೆ ಹಿಂದಿರುಗಿದ ಬಳಿಕ ಬಾಲಕನ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆತನಿಗೆ ಕೋಝಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಹಬಾಝ್‌ ಮೆದುಳಿನಲ್ಲಿ ಆಂತರಿಕ ರಕ್ತಸ್ರಾವವಾಗಿತ್ತು ಮತ್ತು ಕಿವಿಯ ಬಳಿ ಮೂಳೆ ಮುರಿತವಾಗಿದೆ. ಇದರಿಂದಾಗಿ ಶನಿವಾರ ಮುಂಜಾನೆ ಶಹಬಾಝ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 

 

ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಶಿವನ್‌ಕುಟ್ಟಿ, ಈ ಕುರಿತು ಇಲಾಖಾ ತನಿಖೆಯನ್ನು ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತ ವಿದ್ಯಾರ್ಥಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!