ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಮನ್ಸ್ ಜಾರಿ
ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣ ಸಂಬಂಧ ನಗರದ 1ನೇ ತ್ವರಿತಗತಿ ವಿಶೇಷ ನ್ಯಾಯಾಲಯವು (ಪೋಕ್ಸೋ ಕೋರ್ಟ್) ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಹಾಜರಿಗೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ನ್ಯಾಯಾಲಯ ಪ್ರಕರಣದ ವಿಚಾರಣೆ ಪ್ರಾರಂಭಿಸಿದೆ. ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 8 ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಎ) ಅಡಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪದಡಿ ಕಾಗ್ನಿಜೆನ್ಸ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿದೆ.
ಅಲ್ಲದೆ, ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸಿ ಮಾರ್ಚ್ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಜೊತೆಗೆ, ಪ್ರಕರಣದ ಸಹ ಆರೋಪಿಗಳಾದ ವೈ.ಎಂ.ಅರುಣ (ಆರೋಪಿ-2), ರುದ್ರೇಶ್ ಎಂ.ಸಿದ್ದಯ್ಯ (ಆರೋಪಿ-2) ಜಿ.ಮರಿಸ್ವಾಮಿ (ಆರೋಪಿ-4) ಅವರ ವಿರುದ್ಧ ಐಪಿಸಿ ಸೆಕ್ಷನ್ 204 (ಸಾಕ್ಷ್ಯ ನಾಶ), 214 (ಅಪರಾಧ ಮರೆಮಾಚುವುದಕ್ಕೆ ಪ್ರತಿಫಲವಾಗಿ ಬಹುಮಾನ, ಸ್ವತ್ತು ನೀಡುವುದು) ಮತ್ತು 37 (ಅಪರಾಧ ಕೃತ್ಯ ಎಸಗಲು ಸಹಕರಿಸಿದ) ಆರೋಪದಡಿ ಕಾಗ್ನಿಜೆನ್ಸ್ ಸ್ವೀಕರಿಸಿ, ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ.





