ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ: ಕಟ್ ಕನ್ವರ್ಷನ್ ಜಾಗದ ಸಮಸ್ಯೆಗೆ ಪರಿಹಾರ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಾಧಿಕಾರಿ
ವಿಟ್ಲ: ಸರ್ಕಾರದ ಆದೇಶದಂತೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಪ್ರಾರಂಭವಾಗಿದ್ದು, “ಎ” ರಿಜಿಸ್ಟರ್ ಹಾಗೂ “ಬಿ” ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆಯನ್ನು ಪಡೆಯಬಹುದು. ಕಟ್ ಕನ್ವರ್ಷನ್ ಆದ ಸ್ವತ್ತುಗಳಿಗೆ ಸುಲಭವಾಗಿ “ಬಿ” ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆಯನ್ನು ಪಡೆಯಲು ಅವಕಾಶವಿದ್ದು, ಸುತ್ತೋಲೆಯ ಪ್ರಕಾರ 10/05/2025 ಕೊನೆಯ ದಿನವಾಗಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಮತ್ತು ಮುಖ್ಯಾಧಿಕಾರಿ ಕರುಣಾಕರ ವಿ. ಹೇಳಿದರು.
“ಬಿ” ರಿಜಿಸ್ಟರ್ ಮೂಲಕ ಖಾತಾ ಪಡೆಯಲು 2024 ಸೆ.10ರ ಮೊದಲು ನೊಂದಾವಣೆಯಾದ ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ಮಾರಾಟ ಪತ್ರ/ದಾನಪತ್ರ/ ವಿಭಾಗ ಪತ್ರ/ ಹಕ್ಕು ಖುಲಾಸೆ ಪತ್ರ, ಪ್ರಸಕ್ತ ಸಾಲಿನ ವರೆಗಿನ ಋಣ ಭಾರ ಪ್ರಮಾಣ ಪತ್ರ (ಇ.ಸಿ.), ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೊಟೋ ಮತ್ತು ಸ್ವತ್ತಿನ ಪೊಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಯನ್ನು ನೀಡಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲಾ ದಾಖಲೆಗಳನ್ನು ಏಕಕಾಲದಲ್ಲಿ ಒದಗಿಸಿದಲ್ಲಿ ಸಕಾಲದ ಮೂಲಕ 7 ದಿನಗಳಲ್ಲಿ ಅರ್ಜಿ ವಿಲೇವಾರಿಯಾಗಿ ಇ-ಖಾತೆ ಫಲಾನುಭವಿಗಳಿಗೆ ಲಭಿಸಲಿದೆ. “ಬಿ” ರಿಜಿಸ್ಟರ್ ನಲ್ಲಿ ದಾಖಲಿಸುವ ಸ್ವತ್ತುಗಳಿಗೆ ಮೊದಲ ಬಾರಿ ಡಬ್ಬಲ್ ಟ್ಯಾಕ್ಸ್ ಬೀಳಲಿದ್ದು, ಮುಂದಿನ ವರ್ಷದಿಂದ ಸಿಂಗಲ್ ಟ್ಯಾಕ್ಸ್ ಆಗಲಿದೆ. ಪ್ರಸ್ತುತ 193 ಸ್ವತ್ತುಗಳಿಗೆ ಡಬ್ಬಲ್ ಟ್ಯಾಕ್ಸ್ ವಿಧಿಸಲಾಗಿದ್ಡು ಈ ಆಸ್ತಿ ಮಾಲೀಕರು “ಬಿ” ರಿಜಿಸ್ಟರಿನಲ್ಲಿ ದಾಖಲಿಸಿ ಇ-ಖಾತೆ ಪಡೆಯಬಹುದು . ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 800ಕ್ಕೂ ಅಧಿಕ ಕಟ್ ಕನ್ವರ್ಷನ್ ಆಗಿರುವ ಸ್ವತ್ತುಗಳು ಖಾತಾ ಆಗದೆ ಸಮಸ್ಯೆಯಲ್ಲಿವೆ ಎಂದು ಹೇಳಲಾಗಿದೆ.
ದಾಖಲೆಗಳನ್ನು ಆನ್ ಲೈನ್ ವ್ಯವಸ್ಥೆಗೆ ತರುವ ಕಾರ್ಯವಾಗುತ್ತಿದ್ದು, ಆಸ್ತಿ ಕಣಜದಲ್ಲಿ 8322 ಆಸ್ತಿಗಳು ದಾಖಲಾಗಿದ್ದು ಈ ಪೈಕಿ 1345 ಆಸ್ತಿಗಳ ಮಾಲೀಕರು ದಾಖಲೆಗಳನ್ನು ನೀಡಿ ಇ-ಖಾತಾ ಪಡೆದಿರುತ್ತಾರೆ. ಇನ್ನು ಬಾಕಿ ಉಳಿದಿರುವ 6977 ಆಸ್ತಿಗಳ ದಾಖಲೆಗಳನ್ನು ಸಂಬಂಧಿಸಿದ ಆಸ್ತಿ ಮಾಲೀಕರು ಆನ್ ಲೈನ್ ವ್ಯವಸ್ಥೆಯಲ್ಲಿ ಅಥವಾ ಕಛೇರಿಯಲ್ಲಿ ಪರಿಶೀಲನೆಯನ್ನು ನಡೆಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಪರಿಶೀಲನೆ ಸಂದರ್ಭದಲ್ಲಿ ತಿದ್ದುಪಡಿಗಳು ಇದ್ದರೆ ಪಟ್ಟಣ ಪಂಚಾಯಿತ್ ಗೆ ತಿಳಿಸಿದಲ್ಲಿ ಸರಿಪಡಿಸಲು ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಯಲ್ಲಿ ಪಟ್ಟಣ ಪಂಚಾಯಿತಿ ಸಹಾಯವಾಣಿ 08255 239220 ಮೂಲಕ ಪಡೆಯಬಹುದು ಎಂದು ತಿಳಿಸಿದರು.
ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ಕಂದಾಯ ವಸೂಲಿಗಾರರಾದ ಚಂದ್ರ ಶೇಖರ ವರ್ಮ ಮತ್ತಿತರರು ಉಪಸ್ಥಿತರಿದ್ದರು.




