ಹುಟ್ಟೂರ ಸನ್ಮಾನವೇ ದೊಡ್ಡ ಸಂತೋಷ: ಬದ್ರುದ್ದೀನ್ ಕೆ ಮಾಣಿ
ಬಂಟ್ವಾಳ: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ ಮಾಣಿ ಅವರು ತಮ್ಮ ಹುಟ್ಟೂರಿನ ನಾಗರಿಕರ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ದೂರದ ಎಲ್ಲೊ ಸಿಗುವ ಸನ್ಮಾನಕ್ಕಿಂತ ಹುಟ್ಟೂರಿನ ನಾಗರಿಕರು, ಬಾಲ್ಯದ ಗೆಳೆಯರು ಹಾಗೂ ಶಾಲಾ ಸಹಪಾಠಿಗಳ ಸನ್ಮಾನವು ಅತ್ಯಂತ ಸಂತೋಷ ನೀಡಿದೆ ಎಂದರು.
ಬದ್ರುದ್ದೀನ್ ಆಯುಕ್ತರಾದ ನಂತರ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಫೆಬ್ರವರಿ 22, 2025 ರಂದು ನೆರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಮಾಣಿ, ಪೆರಾಜೆ, ನೆಟ್ಲಮುಡ್ನೂರು, ಅನಂತಾಡಿ ಮತ್ತು ಬರಿಮಾರು ಗ್ರಾಮದ ನಾಗರಿಕರು ಜಂಟಿಯಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನಗೆ ಮಹತ್ತರವಾದ ಜವಾಬ್ದಾರಿ ಸಿಕ್ಕಿದೆಯೆಂದು ದರ್ಪದಿಂದ ವರ್ತಿಸದೆ ಹುಟ್ಟೂರಿನ ಜನರಿಗೆ ಏನು ಈ ಹಿಂದೆ ಸಹಾಯ ಸಹಕಾರವನ್ನು ನೀಡುತ್ತಾ ಬಂದಿದ್ದೇನೆ ಹಾಗೆ ಮುಂದುವರಿಸುತ್ತೇನೆ ಅದರಲ್ಲಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದರು.
ಒಟ್ಟಾರೆ ಕಾರ್ಯಕ್ರಮದಲ್ಲಿ ದೀರ್ಘಕಾಲ ತುಳುನಾಡಿನ ದೈವಾರಾಧನೆ ಸೇವೆಯನ್ನು ಮಾಡುತ್ತಾ ಬಂದಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಲೋಕಯ್ಯ ಶೇರಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಶೇಖರ ಪರವ ಎರ್ಮೆನಿಲೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಂಶುಪಾಲ ಹುದ್ದೆಯನ್ನು 35 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಪೂರೈಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಗಂಗಾಧರ ಆಳ್ವ ಅನಂತಾಡಿ ಅವರ ಗೌರವ ಸನ್ಮಾನವು ಹೆಚ್ಚು ಮೆರುಗು ನೀಡಿತ್ತು.
ಮಾಜಿ ಸಚಿವ ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಇಬ್ಬರು ಮಾತನಾಡಿ ರಾಜ್ಯ ಮಾಹಿತಿ ಆಯೋಗ ಆಯುಕ್ತ ಹುದ್ದೆ ನಮ್ಮ ಜಿಲ್ಲೆಗೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ಅದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಉಪಯುಕ್ತ ಆಗುವ ರೀತಿಯಲ್ಲಿ ಪ್ರಾಮಾಣಿವಾಗಿ ಪ್ರಯತ್ನಿಸಲು ಸಲಹೆ ನೀಡಿದರು. ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಅಭಿನಂದನಾ ಭಾಷಣಗೈದರು.
ವೇದಿಕೆಯಲ್ಲಿ ಮಾಣಿ ಗ್ರಾ.ಪಂ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪೆರಾಜೆ ಗ್ರಾ.ಪಂ ಅಧ್ಯಕ್ಷ ಎಂ.ಕುಶಲ, ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ, ನಾಗರಿಕ ಸನ್ಮಾನ ಸಮಿತಿ ಸಂಚಾಲಕ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್ ಉಪಸ್ಥಿತರಿದ್ದು, ಮೆಲ್ವಿನ್ ಮಾರ್ಟಿಸ್, ನಿರಂಜನ್ ರೈ ಕುರ್ಲೇತ್ತಿಮಾರು ಸನ್ಮಾನ ಪತ್ರ ವಾಚಿಸಿದರು. ಹಾಜಿ ಎಸ್. ಎಂ ಮಹಮ್ಮದ್ ರಫೀಕ್ ನೇರಳಕಟ್ಟೆ ಸ್ವಾಗತಿಸಿ, ಬಾಲಕೃಷ್ಣ ಆಳ್ವ ರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.




