ರೈಲ್ವೆ ಹಳಿ ರೀಲ್ಸ್ ಮಾಡುತ್ತಿದ್ದಾಗ ರೈಲು ಢಿಕ್ಕಿ: ಮೂವರು ಯುವಕರು ಸಾವು

ದೊಡ್ಡಬಳ್ಳಾಪುರ: ರೀಲ್ಸ್ ಗಾಗಿ ಜೀವವನ್ನೆ ಕಳೆದುಕೊಳ್ಳುವ ಹಂತಕ್ಕೆ ಈಗಿನ ಯುವಜನತೆ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಸಿದ್ದೇನಾಯಕನಹಳ್ಳಿ ರೈಲ್ವೆ ಹಳಿ ಬಳಿ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ 18 ವರ್ಷದ ರಾಹುಲ್, 20 ವರ್ಷದ ಬಿಕೇಶ್ ಮತ್ತು 24 ವರ್ಷದ ಲಲನ್ ಎಂದು ಗುರುತಿಸಲಾಗಿದೆ. ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದಿದ್ದರು. ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಶವಂತಪುರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.