ಎಸ್ಡಿಪಿಐ ಮುಖಂಡ ಹಾಗೂ ಬಿಜೆಪಿಯ ಒಬಿಸಿ ಮೋರ್ಚಾ ಕಾರ್ಯದರ್ಶಿಯ ಹತ್ಯೆ ಹಿನ್ನೆಲೆ:
ಆಲಪ್ಪುಝ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಆಲಪ್ಪುಝ: ಕೇರಳದ ಕರಾವಳಿ ಭಾಗ ಆಲಪ್ಪುಝದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಕೆ.ಎಸ್.ಶಾನ್ ಎಂಬವರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದ ದುಷ್ಕರ್ಮಿಗಳು ಬಳಿಕ ಅವರನ್ನು ರಸ್ತೆಯಲ್ಲಿಯೇ ಬರ್ಬರವಾಗಿ ಕೊಲೆಗೈದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಆಲಪ್ಪುಝದಲ್ಲಿ ಬಿಜೆಪಿ ರಾಜ್ಯ ನಾಯಕರೋರ್ವರ ಹತ್ಯೆಗೈಯಲಾಗಿದೆ. ಎರಡು ಹತ್ಯೆಗಳ ನಂತರ ಸೆಕ್ಷನ್ 144ರ ಅಡಿಯಲ್ಲಿ ಆಲಪ್ಪುಝ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ.
ಮೃತರನ್ನು ಬಿಜೆಪಿಯ ಒಬಿಸಿ ಮೋರ್ಚಾ ಕಾರ್ಯದರ್ಶಿ ರೆಂಜಿತ್ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ರವಿವಾರ ಬೆಳ್ಳಂಬೆಳಗ್ಗೆ ಅವರ ಮನೆಗೆ ನುಗ್ಗಿದ ಗುಂಪೊಂದು ಅವರನ್ನು ಇರಿದು ಕೊಲೆಗೈದಿತ್ತು.
ಶನಿವಾರದಂದು ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರ ಮೇಲೆ ಆಲಪ್ಪುಝ ಜಿಲ್ಲೆಯಲ್ಲಿ ಅಪರಿಚಿತ ತಂಡವೊಂದು ದಾಳಿ ನಡೆಸಿತ್ತು. ಕೆ.ಎಸ್.ಶಾನ್ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ಗೆ ಕಾರು ಢಿಕ್ಕಿ ಹೊಡೆದಿತ್ತು. ಬಳಿಕ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಅವರ ದೇಹದಲ್ಲಿ 40ಕ್ಕೂ ಹೆಚ್ಚು ಗಾಯಗಳಾಗಿತ್ತು ಎಂದು ತಿಳಿದು ಬಂದಿದೆ. ಬಳಿಕ ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಕೆ.ಎಸ್.ಶಾನ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ ಆರೋಪಿಸಿದ್ದಾರೆ.





