ಪುತ್ತೂರು: ಬಿಜೆಪಿ ಮುಖಂಡನ ಮನೆ ಧ್ವಂಸ ಪ್ರಕರಣ: ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ವಿರುದ್ಧ FIR ದಾಖಲು

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ್ದ ಜಾಗದಲ್ಲಿದ್ದ ಬಿಜೆಪಿ ಮುಖಂಡನ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರ ಮೇಲೆ ದೇವಳದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ಬನ್ನೂರು ಮತ್ತು ಇತರ 9 ಮಂದಿಯ ವಿರುದ್ಧ ದೇವಳ ಜಾಗಕ್ಕೆ ಅಕ್ರಮ ಪ್ರವೇಶ, ಮನೆ ಧ್ವಂಸ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಈ ಘಟನೆಗೆ ಸಂಬಂಧಿಸಿ ದಾಖಲಾದ ಎರಡನೇ ಪ್ರಕರಣವಾಗಿದೆ.
ಮನೆ ದ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿ ಬುಧವಾರ ರಾಜೇಶ್ ಬನ್ನೂರು ಅವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ವಿನಯ ಸುವರ್ಣ ಹಾಗೂ ಇತರ 12 ಮಂದಿ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ರಾಜೇಶ್ ಬನ್ನೂರು ಹಾಗೂ 9 ಮಂದಿಯ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.