ಪಂಜಿಮಾರು ರಸ್ತೆ ಬಳಿ ಎಸೆದ ವ್ಯಕ್ತಿಯಿಂದಲೇ ಕಸವನ್ನು ತೆಗೆಸಿದ ಗ್ರಾ.ಪಂ. ಸದಸ್ಯೆ
ಶಿರ್ವ: ಮನೆಯ ಕಸವನ್ನು ಗೋಣಿ ಚೀಲದಲ್ಲಿ ತುಂಬಿಸಿ ವಾಹನದಲ್ಲಿ ತಂದು ಶಿರ್ವಕೋಡು ಪಂಜಿಮಾರು ರಸ್ತೆ ಬಳಿ ಎಸೆದು ಹೋದ ವ್ಯಕ್ತಿಯಿಂದಲೇ ಕಸವನ್ನು ಶಿರ್ವ ಗ್ರಾ..ಪಂ. ಸದಸ್ಯೆಯೋರ್ವರು ಹೆಕ್ಕಿಸಿದ ಪ್ರಸಂಗ ಸೋಮವಾರ ನಡೆದಿದೆ.
ಕಟಪಾಡಿಯ ವ್ಯಕ್ತಿ ರವಿವಾರ ಮತ್ತು ಸೋಮವಾರ ಬೆಳಗ್ಗೆ ಶಿರ್ವ ಗ್ರಾ.ಪಂ. ಸದಸ್ಯೆ ಜೆಸಿಂತಾ ಅವರ ಮನೆಯ ಬಳಿ ಕೋಡು ಪಂಜಿಮಾರು ರಸ್ತೆ ಬದಿ ಕಸ ತ್ಯಾಜ್ಯಗಳನ್ನು ಸುರಿದು ಹೋಗಿದ್ದ. ಎಸೆದ ಕಸದಲ್ಲಿ ಆತ ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸಿದ ಬಿಲ್ ಸಿಕ್ಕಿತ್ತು.
ಅದನ್ನು ಜೆಸಿಂತಾ ಅವರು ಶಿರ್ವ ಗ್ರಾ.ಪಂ. ಪಿಡಿಒ ಅವರಲ್ಲಿ ನೀಡಿದ್ದು,ಬಟ್ಟೆ ಅಂಗಡಿಯಲ್ಲಿ ವಿಚಾರಿಸಿದಾಗ ಖರೀದಿ ಮಾಡಿದಾತನ ಮೊಬೈಲ್ ನಂಬರ್‌ಸಿಕ್ಕಿತ್ತು. ಆ ಮೊಬೈಲ್ ನಂಬರನ್ನು ಸಂಪರ್ಕಿಸಿದ ಗ್ರಾ.ಪಂ. ಸದಸ್ಯೆ ಜೆಸಿಂತಾ ಆತನನ್ನು ಕರೆಸಿ ಆತನಿಂದಲೇ ಸುರಿದ ಕಸವನ್ನು ಹೆಕ್ಕಿಸಿದ್ದಾರೆ.
ಗ್ರಾ.ಪಂ. ರಸ್ತೆ ಬದಿ ಕಸ ಎಸೆಯುತ್ತಿರುವವರನ್ನು ಪತ್ತೆ ಹಚ್ಚಿ ರೂ. 5 ಸಾವಿರ ದಂಡ ವಿಧಿಸಿ ಅವರಿಂದಲೇ ವಿಲೇವಾರಿ ಮಾಡಿಸುವ ಪ್ರಯತ್ನ ನಡೆಸುತ್ತಿದ್ದು, ಆತ ತಪ್ಪೊಪ್ಪಿಕೊಂಡು ಕಸ ಹೆಕ್ಕಿ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಶಿರ್ವ ಗ್ರಾ.ಪಂ. 2 ಸಾವಿರ ರೂ. ದಂಡ ವಿಧಿಸಿದೆ.




