ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ 2,250 ಪುಟಗಳ ಆರೋಪ ಪಟ್ಟಿ ಸಲ್ಲಿಕೆ
ಮಂಗಳೂರು: ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಹ್ಮತ್ ಸೇರಿ ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವುದಾಗಿ ವಾರದಿಯಾಗಿದೆ.
ತನಿಖಾಧಿಕಾರಿಯಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಮುಖ ಆರೋಪಿ ಎನ್ನಲಾದ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ರಹ್ಮತ್ ಮತ್ತು ಆಕೆಯ ಪತಿ ಪ್ರಕರಣದ 5ನೇ ಆರೋಪಿ ಶುಐಬ್, ಎ2 ಆರೋಪಿ ಅಬ್ದುಲ್ ಸತ್ತಾರ್, ಎ3 ಆರೋಪಿ ನಂದಾವರ ನಿವಾಸಿ ಕಲಂದರ್ ಶಾಫಿ, ಎ4 ಆರೋಪಿ ಕೃಷ್ಣಾಪುರ ನಿವಾಸಿ ಮುಸ್ತಫ ಹಾಗೂ 6ನೇ ಆರೋಪಿ ಸತ್ತಾರ್ ನ ಕಾರು ಚಾಲಕ ಸಿರಾಜ್ ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ ಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನೂರಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಸೋಮವಾರ ಸಂಜೆ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ 2,250 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.




