ಮಂಗಳೂರು: ನಾಲ್ಕು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ
ಮಂಗಳೂರು: ಮಹಿಳೆಯೊಬ್ಬರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ. ಈ ನಾಲ್ವರು ಶಿಶುಗಳ ಪೈಕಿ ಎರಡು ಗಂಡು, ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಶಿಶುಗಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿದೆ. ಆದರೆ 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಶಿಶುಗಳಿಗೆ ಎನ್‌ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಲ್ಕು ಶಿಶುಗಳ ಜನನ ಬಹಳ ಅಪರೂಪವಾಗಿದ್ದು, ಇದು 7,00,000 ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ. ಸ್ತ್ರೀರೋಗತಜ್ಞೆ, ಡಾ.ಜೋಯ್ಲೀನ್ ಡಿಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದರು. ಹೆರಿಗೆ ಸಂದರ್ಭ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ತಾಯಿ-ಮಕ್ಕಳಿಗೆ ಆರೈಕೆ ಮಾಡಿದೆ. ದ.ಕ.ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣವಾಗಿದೆ.
ಫೀಟಲ್ ಮೆಡಿಸಿನ್ ಮತ್ತು ಸೋನಾಲಜಿ ತಂಡದಲ್ಲಿ ಡಾ. ಮುರಳೀಧರ್, ಡಾ. ರಾಮ್ ಬಸ್ತಿ ಮತ್ತು ಡಾ. ಮಹೇಶ್ ಸಹಕರಿಸಿದರೆ, ಪ್ರಸೂತಿ ತಂಡದಲ್ಲಿ ಡಾ. ಸುಜಯಾ ರಾವ್ ಮತ್ತು ತಂಡಕ್ಕೆ ಡಾ. ವಿಸ್ಮಯ, ಡಾ. ಏಕ್ತಾ, ಡಾ. ದಿಯಾ ಮತ್ತು ಡಾ ನಯನ ಅವರು ಅಗತ್ಯ ಆರೈಕೆ ಮತ್ತು ಸಲಹೆಯನ್ನು ಗರ್ಭಾವಸ್ಥೆಯಲ್ಲಿ ನೀಡಿದ್ದಾರೆ.
ಮಕ್ಕಳ ತೂಕ ಅತೀ ಕಡಿಮೆ ಇದ್ದ ಕಾರಣ ಹೆರಿಗೆ ಬಳಿಕ ಶಿಶು ತಜ್ಞೆ ಡಾ. ಚಂದನ ಪೈ ಅವರ ನೇತೃತ್ವದ ತಂಡದ ಸಹಕಾರದಲ್ಲಿ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಸಮರ್ಪಕ ಆರೈಕೆ ಮಾಡಲಾಯಿತು. ಡಾ. ಪ್ರವೀಣ್ ಬಿ.ಕೆ. ಮತ್ತು ಅವರ ಶಿಶು ತಜ್ಞ ತಂಡವೂ ಸೂಕ್ತ ವೈದ್ಯಕೀಯ ಸಲಹೆ, ಮಾರ್ಗದರ್ಶದನೊಂದಿಗೆ ನವಜಾತ ಶಿಶುಗಳ ಆರೈಕೆ ಮಾಡಿದ್ದಾರೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.




