November 29, 2026

ಕುದ್ದುಪದವು ವಾಲ್ಮೀಕಿ ವಸತಿ ಶಾಲೆ : ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ – ರಾಧಾಕೃಷ್ಣ ಎರುಂಬು

0
image_editor_output_image71095057-1795888097792

ಕುದ್ದುಪದವು: ಮಗುವಿನ ಪ್ರತಿಭೆಗೆ, ಮೌಲ್ಯಯುತ ಶಿಕ್ಷಣಕ್ಕೆ ಶಾಲೆಯ ಶಿಕ್ಷಕರ ಜೊತೆ ಪೋಷಕರು ಸಹಕರಿಸಬೇಕು. ಗ್ರಾಮೀಣ ಪ್ರದೇಶಗಳಿಂದ ಬಂದಿರುವ  ಪ್ರತಿಯೊಬ್ಬ ವಿದ್ಯಾರ್ಥಿಗೂ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿರುವ ಕೌಶಲ್ಯಗಳನ್ನು ಅನಾವರಣಗೊಳಿಸುತ್ತಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಜನಪ್ರಿಯ ಸಮೂಹ ಶಿಕ್ಷಣ ಸಂಸ್ಥೆಗಳು, ಹಾಸನ ಇದರ ಮುಖ್ಯ ಶೈಕ್ಷಣಿಕ ಅಧಿಕಾರಿ ರಾಧಾಕೃಷ್ಣ ಎರುಂಬು ಹೇಳಿದರು.


ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ಕುದ್ದುಪದವು ಮತ್ತು ಕಡೇಶಿವಾಲಯ ಇದರ ವತಿಯಿಂದ ಕುದ್ದುಪದವಿನಲ್ಲಿ ಶನಿವಾರ (ನ. 28) ನಡೆದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉದಯಗಿರಿ, ಕುದ್ದುಪದವು ಸಮೂಹ ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ್ ಕೆ. ಅವರು, ಮಕ್ಕಳ ಪಾಲಿಗೆ ಶಾಲಾ ವಾರ್ಷಿಕೋತ್ಸವವು ಮಕ್ಕಳ ಹಬ್ಬವಿದ್ದಂತೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಧೈರ್ಯವನ್ನು ಬೆಳೆಸುತ್ತವೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2) ವಿನಯ ಕುಮಾರಿ ಮಾತನಾಡಿ, ಉತ್ತಮ ಚಾರಿತ್ರ್ಯ, ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಗಳನ್ನು ಹೊಂದಿರುವ ಮಕ್ಕಳನ್ನು ರೂಪಿಸುವ ನಿಟ್ಟಿನಲ್ಲಿ ವಾಲ್ಮೀಕಿ ವಸತಿ ಶಾಲೆಯು ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.


ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮಜಿ-ವೀರಕಂಬ ಇದರ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್.ಕೆ., ರೇವತಿ, ನಿವೃತ್ತ ಮುಖ್ಯೋಪಾಧ್ಯಾಯಿನಿ, ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ದಂಬೆ,   ಉದ್ಯಮಿಗಳಾದ ಎ. ಗೋವಿಂದರಾಯ ಶೆಣೈ, ಎಂ. ಕುಂಞ ನಾಯ್ಕ, ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಕೇಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಕರೀಮ್ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಮೇಲ್ವಿಚಾರಕಿ ಭವ್ಯ ಪಿ. ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಯಶೋಧ ಎಸ್. ವಂದಿಸಿದರು. ಶಿಕ್ಷಕಿ ವಾಣಿಶ್ರೀ ಯಂ. ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ರಂಜಿತ್ ಕುಮಾರ್, ತುಳಸಿ, ಅಜಯ್ ಕುಮಾರ್ ಪಿ. ಹಾಗೂ ಜಯರಾಜ್ ಕೆ. ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿಯರಾದ ವಿದ್ಯಾಕುಮಾರಿ ಎ., ವನಿತ ಯಂ., ಮಂಗಳ ಕೆ.ಎಂ., ಜಯಲಕ್ಷ್ಮೀ ಡಿ. ಹಾಗೂ ಮಲ್ಲಿಕಾ ಬಿ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು. ವಸತಿ ಶಾಲೆಯ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳ ನೃತ್ಯ, ಕಲೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

error: Content is protected !!