ಮೂಲ್ಕಿ: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ: ಪೊಲೀಸ್ ಕೇಸ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
ಮೂಲ್ಕಿ: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದ ವಿದ್ಯಾರ್ಥಿಯೊಬ್ಬ ಕೇಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ನಡೆದಿದೆ.
ತಡಂಬೈಲ್ ವೆಂಕಟ್ರಮಣ ಕಾಲೊನಿ ನಿವಾಸಿ ಮೋಹನ್ ಆಚಾರ್ಯ ಅವರ ಪುತ್ರ ಧನುಷ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಐಟಿಐ ವಿದ್ಯಾರ್ಥಿ ಧನುಷ್ ಡಿಸೆಂಬರ್11ರಂದು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಅಪಘಾತ ನಡೆಸಿದ್ದ.
ಆತನಿಗೆ ವಾಹನ ಚಾಲನಾ ಪರವಾನಗಿ ಇರಲಿಲ್ಲ. ಅಪಘಾತ ನಡೆದ ಮತ್ತೊಂದು ದ್ವಿಚಕ್ರ ವಾಹನ ಸವಾರನೊಂದಿಗೆ ಮಾತುಕತೆ ನಡೆದು ಆತನಿಗೆ ಹಣ ನೀಡಲು ವ್ಯವಸ್ಥೆಯಾಗದ ಕಾರಣ ಹಾಗೂ ಇದರಿಂದ ಕೇಸ್ ಆದರೆ ತೊಂದರೆಯಾಗುತ್ತದೆ ಎಂದು ಹೆದರಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.