ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ
ಹೈದರಾಬಾದ್: ಗುಂಪೊಂದು ರವಿವಾರ ಹೈದರಾಬಾದ್ ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ನುಗ್ಗಿ, ಹೂಕುಂಡ ಇತ್ಯಾದಿಗಳನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.
ಅಲ್ಲು ಅರ್ಜುನ್ ಅವರ ಕಾಂಪೌಂಡ್ ಮೇಲೆ ಹತ್ತಿರುವ ಪ್ರತಿಭಟನಾಕಾರರು, ಅವರ ನಿವಾಸದ ಮೇಲೆ ಟೊಮೆಟೊಗಳನ್ನು ಎಸೆದಿದ್ದಾರೆ. ನಂತರ ಅವರು ಅಲ್ಲು ಅರ್ಜುನ್ ನಿವಾಸದ ಆವರಣ ಪ್ರವೇಶಿಸಿ, ಅಲಂಕಾರಿಕ ಸಸ್ಯಗಳನ್ನು ಹಾನಿಗೊಳಿಸಿದ್ದಾರೆ. ನಟ ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಥಳದಲ್ಲಿ ಉದ್ರಿಕ್ತ ವಾತಾವರಣವನ್ನು ನಿರ್ಮಿಸಿದ್ದಾರೆ.
ಡಿ.4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ-2ʼ ಪ್ರಿಮಿಯರ್ ಶೋ ವೇಳೆ ರೇವತಿ ಎನ್ನುವ ಮಹಿಳೆ ಕಾಲ್ತುಳಿತ ಉಂಟಾಗಿ ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಅಲ್ಲು ಅರ್ಜುನ್ ಸೇರಿದ ಇತರರನ್ನು ಬಂಧಿಸಲಾಗಿತ್ತು. ಅಲ್ಲು ಅರ್ಜುನ್ ಜೈಲಿನಲ್ಲಿ ಒಂದು ದಿನ ಕಳೆದು ಮಧ್ಯಂತರ ಜಾಮೀನು ಪಡೆದು ಬಂದಿದ್ದಾರೆ.
ರೇವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಅಲ್ಲು ಅರ್ಜುನ್ ನಿವಾಸದ ಮುಂದೆ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಿದ್ದಾರೆ. ಅಲ್ಲು ಅರ್ಜುನ್ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.