ಕಾಪು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಮುವಾದಿಗಳಿಂದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ: ಕ್ಯಾಂಪಸ್ ಫ್ರಂಟ್ ಖಂಡನೆ
ಕಾಪು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ದಿನಾಂಕ: 16/12/2021 ರಂದು ಮುಸ್ಲಿಂ ವಿದ್ಯಾರ್ಥಿಗಳು ಅನ್ಯ ಧರ್ಮಿಯ ವಿದ್ಯಾರ್ಥಿನಿಯರೊಡನ ಮಾತನಾಡಿದರು ಎಂದು ಆರೋಪಿಸಿ ಹರಿತವಾದ ವಸ್ತುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಮುಸ್ಲಿಂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಕೋಮುವಾದಿ ಮನಸ್ಥಿತಿಯ ಫಟಿಂಗರು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಕೊಲೆಗೆ ಯತ್ನಿಸುವ ಮೂಲಕ ಸಮಾಜದಲ್ಲಿ ಭಯ ಉತ್ಪಾದಿಸಲು ಹೊರಟಿದ್ದಾರೆ. ಇತ್ತೀಚಿಗೆ ಉಡುಪಿ ಜಿಲ್ಲಾದ್ಯಂತ ಮುಸ್ಲಿಂ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಸಾಮಾನ್ಯವಾಗಿ ಬಿಟ್ಟಿವೆ. ನಿರ್ದಿಷ್ಟ ಧರ್ಮದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಧರ್ಮಾಂಧರು ಊರಿನ ಶಾಂತಿಯನ್ನು ಕದಡಲು ಯತ್ನಿಸುತ್ತಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳ ಮೇಲಿನ ಮಾರಣಾಂತಿಕ ಹಲ್ಲೆಗಳ ಕುರಿತಾಗಿ ಗಮನಕ್ಕೆ ತಂದರೂ ಸಹ ಸಮಾಜ ಘಾತುಕ ಶಕ್ತಿಗಳ ಉಪಟಳ ನಿಲ್ಲಿಸುವ ರೀತಿಯಲ್ಲಿ ಯಾವುದೇ ಕ್ರಮ ವಹಿಸಿಲ್ಲ ಎಂಬುದು ಸತ್ಯ.
ಇದು ಜಿಲ್ಲೆಯ ನಾಗರಿಕರಿಗೆ ಬಂದೊದಗಿದ ಅಪಾಯವಾಗಿದೆ. ತಕ್ಷಣವಾಗಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಿರಂತರವಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವ ದೌರ್ಜನ್ಯದ ಸೂಕ್ತ ತನಿಖೆ ಮಾಡಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಆಕ್ರಮ್ ಆಗ್ರಹಿಸಿದ್ದಾರೆ.





