ಕೊರಟಗೆರೆ: ಮನೆಯಲ್ಲಿ ಕರಡಿ ಮಾಂಸ ಪತ್ತೆ:
ಆರು ಮಂದಿಯ ಬಂಧನ
ಕೊರಟಗೆರೆ: ಮನೆಯಲ್ಲಿ ಕರಡಿ ಮಾಂಸ ಇಟ್ಟುಕೊಂಡಿದ್ದ ಆರೋಪಿ ಸೇರಿದಂತೆ, ಕೃತ್ಯಕ್ಕೆ ಸಹಕರಿಸಿದ 6 ಮಂದಿಯನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದ ಚಿಕ್ಕ ಬಸವಯ್ಯ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿದಾಗ 1 ಕೆ.ಜಿ.50 ಗ್ರಾಂ ನಷ್ಟು ತೂಕದ ಕರಡಿ ಮಾಂಸ ಪತ್ತೆಯಾಗಿದೆ.
ಈ ಮಾಂಸ ವನ್ಯಜೀವಿಯದ್ದೇ ಎಂದು ಪತ್ತೆ ಹಚ್ಚಲು ಮನೆ ಸುತ್ತ ಮುತ್ತ ಕೆಲವು ಸ್ಥಳಗಳನ್ನು ಪರಶೀಲಿಸಿದಾಗ, ಗೌಜಗಲ್ಲು ಗ್ರಾಮದ ಗೋವಿಂದಪ್ಪನವರ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿ ಮಾಂಸಕ್ಕಾಗಿ ಪರಿವರ್ತಿಸಿರುವ ಸ್ಥಳವನ್ನು ಪತ್ತೆ ಮಾಡಿ, ದೇಹದ ಕೆಲವು ಭಾಗಗಳಾದ ಮುಂಗಾಲು, ನಾಲಿಗೆ, ತುಂಡಾಗಿರುವ ಬಾಲ ಕೃತ್ಯಕ್ಕೆ ಬಳಸಿರುವ ಒಂದು ಮಚ್ಚು ಸ್ಥಳದಲ್ಲಿ ದೊರೆತಿದೆ. ಕಾಡು ಪ್ರಾಣಿಯ ದೇಹಗಳನ್ನು ಪರಶೀಲಿಸಿ ನೋಡಿ ಕರಡಿಯೆಂದು ದೃಢ ಪಡಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳಾದ ಗೌಜಗಲ್ಲು ಗ್ರಾಮದ ಯತೀಶ್(19), ನಾಗರಾಜು(55), ಶ್ರೀಧರ್(32), ರಾಮಯ್ಯ( 62), ರಾಜಣ್ಣ(50), ಚಿಕ್ಕಬಸವಯ್ಯ(36) ಇನ್ನೋರ್ವ ಆರೋಪಿ ಚನ್ನಬಸವಯ್ಯ ತಲೆಮರೆಸಿಕೊಂಡು ಬಳಿಕ ನ್ಯಾಯಾಲಯದಲ್ಲಿ ಹಾಜರಾಗಿರುತ್ತಾನೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ಮಾಹಿತಿ ನೀಡಿದ್ದಾರೆ.
ಗ್ರಾಮದ ಚಿಕ್ಕ ಬಸವಯ್ಯ ಎಂಬುವರ ದೂರವಾಣಿ ಮೊಬೈಲ್ ನ್ನು ಸಿಡಿಆರ್ ಮಾಹಿತಿಯನ್ನು ಪಡೆದು ಪ್ರಕರಣಕ್ಕೆ ಸಂಭಂದಿಸಿರುವ ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಕಾರ್ಯಚರಣೆಯಲ್ಲಿ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಎಸ್.ರಮೇಶ್, ಮಧುಗಿರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್, ಹೆಚ್ ನಾಗರಾಜು, ಸಿಬ್ಬಂದಿಗಳಾದ ವೆಂಕಟರಾಮು, ಚಾಂದ್ ಪಾಷಾ, ರಘು.ಕೆ.ಆರ್, ಜೀಬಿ ನರಸಿಂಹಯ್ಯ, ನರಸರಾಜು ಇತರರು ಇದ್ದರು.





