ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆಗಾಗಿ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾದ ಎಸ್‌ಡಿಪಿಐ ಬೆಳ್ತಂಗಡಿ ನಿಯೋಗ
ಬೆಳ್ತಂಗಡಿ: ದಿನಂಪ್ರತಿ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವಿಲ್ಲದ ಕಾರಣ ಅನಾನುಕೂಲವಾಗಿದ್ದು, ಇದನ್ನು ನಿವಾರಿಸಲು ಧರ್ಮಸ್ಥಳದಿಂದ ಬಿ.ಸಿ ರೋಡ್ ಮಂಗಳೂರು ಮಾತ್ರ ನಿಲುಗಡೆ ಇರುವ ವೇಗದೂತ ಬಸ್ಸುಗಳನ್ನು ಪ್ರಾರಂಭಿಸಿ ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಬಸ್ ಸೌಲಭ್ಯ ಕಲ್ಪಿಸಿ ನೆರವಾಗಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಮಂಗಳೂರು ವಿಭಾಗ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಭೇಟಿಯಾದ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ನಿಯೋಗ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿತು. ನಂತರ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಹಾಗೂ ಧರ್ಮಸ್ಥಳ ವಿಭಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಭೇಟಿಯಾಗಿ ಬಸ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನದಟ್ಟು ಮಾಡಿ ಮನವಿ ಮಾಡಿಕೊಂಡರು.
ಈ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಹನೀಫ್ ಪುಂಜಾಲಕಟ್ಟೆ, ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಆಲಿ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ಧಿಕ್ ಯು.ಪಿ, ಕ್ಷೇತ್ರ ನಾಯಕರಾದ ಅಶ್ರಫ್ ಚಾರ್ಮಾಡಿ, ಸಹಲ್ ನಿರ್ಸಾಲ್, ಮರ್ಷದ್ ಉಜಿರೆ ಉಪಸ್ಥಿತರಿದ್ದರು. ಮಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಹೆಚ್ಚುವರಿ ವೇಗದೂತ ಬಸ್ ಹಾಗೂ ರಾಜಹಂಸ ಬಸ್ ಹಾಕಿ ಆದಷ್ಟು ಬೇಗ ಪ್ರಯಾಣಿಕರ ಬಸ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.