ಮಂಗಳೂರಿನಲ್ಲಿ ಪಿ ಎಫ್ ಐ ಚಲೋ ಹಿನ್ನೆಲೆ:
ನಗರದಲ್ಲಿ ಖಾಕಿ ಫುಲ್ ಅಲರ್ಟ್
ಮಂಗಳೂರು: ಉಪ್ಪಿನಂಗಡಿ ಲಾಠಿಚಾರ್ಜ್ ಘಟನೆಯನ್ನು ಖಂಡಿಸಿ ಮಂಗಳೂರು ನಗರದಲ್ಲಿ ಪಿಎಫ್ಐ ಪ್ರತಿಭಟನೆ ಆಯೋಜಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪಂಪ್ವೆಲ್ ನಿಂದ ಮೆರವಣಿಗೆಯಲ್ಲಿ ಬಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಆದರೆ, ಮಂಗಳೂರು ಪೊಲೀಸರು ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ನಗರದ ಮಿನಿ ವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಹೀಗಾಗಿ ಮಂಗಳೂರು ನಗರದ ಹಂಪನಕಟ್ಟೆ ಸುತ್ತಮುತ್ತ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಲ್ಕು ಕೆಎಸ್ ಆರ್ ಪಿ, ಐದು ಸಿಎಆರ್ ತುಕಡಿ ಸೇರಿದಂತೆ ಕಮಿಷನರೇಟ್ ವ್ಯಾಪ್ತಿಯ ಪೊಲೀಸರನ್ನು ನಿಯೋಜಿಸಿದ್ದು, ಭದ್ರತೆ ಕೈಗೊಂಡಿದ್ದಾರೆ. ಕ್ಲಾಕ್ ಟವರ್, ಎಸ್ಪಿ ಕಚೇರಿ, ಕಮಿಷನರ್ ಕಚೇರಿ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧವೇ ಪ್ರತಿಭಟನೆ ಆಯೋಜಿಸಿರುವುದರಿಂದ ಆಕ್ರೋಶಿತರು ಮೆರವಣಿಗೆ ನಡೆಸುತ್ತ ಧಿಕ್ಕಾರ ಕೂಗುತ್ತಲೇ ಬರುವ ಸಾಧ್ಯತೆಯಿದೆ ಎಂದು ಮುಂಜಾಗ್ರತಾವಾಗಿ ಕ್ರಮಕೈಗೊಳ್ಳಲಾಗಿದೆ.






