ನೆಲ್ಯಾಡಿ: ವಿವಾಹ ವಾರ್ಷಿಕೋತ್ಸವದಂದು ಬೈಕ್ ಪಲ್ಟಿ ಹೊಡೆದು ಮಹಿಳೆ ಮೃತ್ಯು
ನೆಲ್ಯಾಡಿ: ಮದುವೆ ವಾರ್ಷಿಕೋತ್ಸವದ ದಿನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ನೆಲ್ಯಾಡಿ ಬಳಿ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಮಹಿಳೆಯ ಪತಿ ಹಾಗೂ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಅತ್ರಿಮಜಲು ನಿವಾಸಿ ದಿನೇಶ ಎಂಬವರ ಪತ್ನಿ ಗೀತಾ(3೦)ಮೃತಪಟ್ಟವರು.
ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ಇವರು ತಮ್ಮ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್ ಪಲ್ಟಿಯಾಗಿತ್ತು.
ದಿನೇಶ್ ಮತ್ತು ಗೀತಾರವರ ಮದುವೆ ವಾರ್ಷಿಕೋತ್ಸವದ ಡಿ. 15 ದಿನವಾಗಿತ್ತು. ಹೀಗಾಗಿ ಅವರು ಅಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತ ಬೈಕ್ ನಲ್ಲಿ ತೆರಳಲು ನಿರ್ಧರಿಸಿದ್ದರು. ಅದರಂತೆ ಬೆಳಿಗ್ಗೆ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ದ್ವಿಚಕ್ರ ವಾಹನ ರಸ್ತೆಯ ಬದಿ ಮುಗುಚಿಬಿದ್ದಿದೆ.





