meesho ಕಂಪೆನಿಗೆ ಆನ್ ಲೈನ್ ಮೂಲಕ 5.50 ಕೋಟಿ ರೂ. ವಂಚನೆ: ಮೂವರು ಆರೋಪಿಗಳ ಬಂಧನ
ಬೆಂಗಳೂರು: ನಕಲಿ ಗ್ರಾಹಕರನ್ನು ಸೃಷ್ಟಿಸಿ ಆನ್ ಲೈನ್ ಇ-ಕಾಮರ್ಸ್ ವೇದಿಕೆ ಮೀಶೋ ಕಂಪನಿಗೆ ಕೋಟ್ಯಂತರ ರೂ. ವಂಚಿಸಿದ್ದ ಗುಜರಾತ್ ಮೂಲದ ಮೂವರು ಆರೋಪಿ ಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್‌ನ ಸೂರತ್ ಜಿಲ್ಲೆಯ ಉತ್ತಮ್ ಕುಮಾರ್(23), ಪಾರ್ಥ್ ಭಾಯ್(24) ಮತ್ತು ಮೌಲಿಕ್(26) ಬಂಧಿತರು.
ಆರೋಪಿಗಳು 2024ರ ಜನವರಿಯಿಂದ ಜುಲೈವರೆಗೆ ಮೀಶೋ ಕಂಪನಿಗೆ ಬರೋಬ್ಬರಿ 5.50 ಕೋಟಿ ರೂ. ವಂಚಿಸಿ ರುವುದು ಗೊತ್ತಾಗಿದೆ. ಆರೋಪಿಗಳಿಂದ 3 ಮೊಬೈಲ್‌ಗಳು, ನಕಲಿ ಸಿಮ್‌ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ಗಳ ವಿರುದ್ಧ ಮೀಶೋ ಕಂಪನಿಯ ಸ್ಥಳೀಯ ನೋಡಲ್ ಅಧಿಕಾರಿ ದೂರು ನೀಡಿದ್ದರು ಎಂದು ಕಮಿಷನರ್ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಸೈಬರ್ ಕ್ರೈಂ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಮೀಶೋ ಕಂಪನಿಯಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಖಾತೆ ವಿವರ ಮತ್ತು ಹಲವಾರು ಮೊಬೈಲ್ ನಂಬರ್‌ಗಳ ಮಾಹಿತಿ ಸಂಗ್ರಹಿಸಿದಾಗ ಒಟ್ಟು 6 ಮಂದಿ ಆರೋಪಿಗಳ ಮಾಹಿತಿ ಸಿಕ್ಕಿತ್ತು. ಸದ್ಯ ಮೂವರು ಪ್ರಮುಖ ಆರೋಪಿಗಳ ಬಂಧಿಸಲಾಗಿದೆ. ಇತರೆ ಮೂವರಿಗಾಗಿ ಶೋಧ ನಡೆಯುತ್ತಿದೆ ಎಂದರು.




