December 4, 2024

ಜಾತಿ ನಿಂದನೆ ಪ್ರಕರಣ: ಆಡಿಯೋದಲ್ಲಿ ಇರುವ ದ್ವನಿ ಬಿಜೆಪಿ ಶಾಸಕ ಮುನಿರತ್ನ ಅವರದ್ದು ಎಂದು ದೃಢ

0

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ಕಳುಹಿಸಿದ್ದ ಆಡಿಯೊ ಮಾದರಿ ವರದಿ ಬಂದಿದ್ದು, ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ಧೇ ಧ್ವನಿ ಎಂಬುದು ದೃಢಪಟ್ಟಿದೆ.

ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್‌ ಅವರು ವೈಯಾಲಿಕಾವಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಮುನಿರತ್ನ ವಿರುದ್ಧ ಸೆ.13ರಂದು ಎಫ್‌ಐಆರ್‌ ದಾಖಲಾಗಿತ್ತು. ಕೋಲಾರದ ಸಮೀಪ ಮುನಿರತ್ನ ಅವರನ್ನು ಸೆ.14ರಂದು ವೈಯಾಲಿಕಾವಲ್‌ ಠಾಣೆ ಪೊಲೀಸರು ಬಂಧಿಸಿದ್ದರು. ಅದಾದ ನಂತರ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಆರೋಪದ ಅಡಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಎರಡೂ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವರ್ಗಾವಣೆ ಮಾಡಿತ್ತು.

ದೂರುದಾರರು ನೀಡಿದ ಆಡಿಯೊ ಕ್ಲಿಪ್‌ ಅನ್ನು ಎಸ್‌ಐಟಿ ಪೊಲೀಸರು, ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದರು. ಇದೀಗ ಅದರ ವರದಿ ಬಂದಿದ್ದು, ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎಂದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಎಫ್‌ಎಸ್‌ಎಲ್‌ ತಜ್ಞರು ಮುನಿರತ್ನ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕೊಂಡೊಯ್ದಿದ್ದರು. ಅಲ್ಲದೇ ದೂರುದಾರ ಧ್ವನಿ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಆಡಿಯೊದ ಮೂಲ ತುಣುಕು ಹಾಗೂ ಆಡಿಯೊ ರೆಕಾರ್ಡ್ ಮಾಡಿದ ಸಾಧನವನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ತಜ್ಞರ ವರದಿ ತನಿಖಾಧಿಕಾರಿಗಳ ಕೈಸೇರಿದೆ’ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!