ಶಿರಾಡಿಪೇಟೆ | ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಪಾದಚಾರಿ ಸಾವು
ಉಪ್ಪಿನಂಗಡಿ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನಪ್ಪಿದ ಘಟನೆ ಶಿರಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಶಿರಾಡಿ ಗ್ರಾಮದ ಪದಂಬಳ ನಿವಾಸಿ ಕೆ.ಎಂ.ಮತ್ತಾಯಿ ಯಾನೆ ಮತ್ತಚ್ಚನ್ (70) ಎಂದು ಗುರುತಿಸಲಾಗಿದೆ. ಪಡಿತರ ತರಲು ಅವರು ಮನೆಯಿಂದ ಶಿರಾಡಿ ಪೇಟೆಗೆ ತೆರಳಿದ್ದರು.
ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅವರಿಗೆ ಧರ್ಮಸ್ಥಳದಿಂದ- ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಅಂಬುಲೆನ್ಸ್ ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಹಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.




