ರಾಯಚೂರು: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪರೀಕ್ಷೆ ಬರೆಯದೇ ರಸ್ತೆಯಲ್ಲೇ ಕುಳಿತು ಪ್ರತಿಭಟನೆ
ರಾಯಚೂರು: ಇಂದು ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ಪ್ರತಿಭಟನೆ ನಡೆಸಿದ ಘಟನೆ ಸಿಂಧನೂರಿನ ಸರಕಾರಿ ಮಹಾವಿದ್ಯಾಲಯ ನಡೆದಿದೆ.
24 ಪ್ರಶ್ನೆ ಪತ್ರಿಕೆ ಬದಲು ಕೇವಲ 12 ಪ್ರಶ್ನೆ ಪ್ರತಿಕೆ ಕಳುಹಿಸಿದ ಕೆಪಿಎಸ್‌ಸಿಯ ಈ ಯಡವಟ್ಟುನಿಂದಾಗಿ 12 ಪ್ರಶ್ನೆ ಪತ್ರಿಕೆಗಳಿದ್ರೂ ಒಂದೇ ಕೋಣೆಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ. ಸಿಂಧನೂರು ನಗರದ ಸರಕಾರಿ ಮಹಾವಿದ್ಯಾಲಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪಿಡಿಓ ಪರೀಕ್ಷೆ ನಡೆಯುತ್ತಿದೆ.
ಬಳಿಕ ನಮಗೆ ನ್ಯಾಯ ಬೇಕು ಎಂದು ಅಭ್ಯರ್ಥಿಗಳು ರಸ್ತೆ ತಡೆದು ಕೆಪಿಎಸ್ ಸಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದಿದ್ದ 800ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ತಹಶಿಲ್ದಾರರ ಅಭ್ಯರ್ಥಿಗಳ ಮನವೊಲಿಸಲು ಯತ್ನಿಸಿದರು. ಪ್ರಶ್ನೆ ಪತ್ರಿಕೆ ಇಲ್ಲದೇ ಪರೀಕ್ಷೆ ಹೇಗೆ ಬರೆಯಬೇಕೆಂದು ಪ್ರಶ್ನಿಸಿದರಲ್ಲದೆ, ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.




