February 3, 2026

ಉಪ್ಪಿನಂಗಡಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರೌರ್ಯ:

ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಪತ್ರಿಕಾಗೋಷ್ಟಿ.

0
image_editor_output_image1955308313-1639640939044

ಉಪ್ಪಿನಂಗಡಿ: ಇಲ್ಲಿನ ಪರಿಸರದಲ್ಲಿ  ಇತ್ತೀಚಿನ ದಿನಗಳಿಂದ ತರಕಾರಿ ಅಂಗಡಿಯನ್ನು ಸುಟ್ಟು ಹಾಕಿದ್ದು, ಮೀನು ಅಂಗಡಿಗೆ ಬೆಂಕಿ ಹಚ್ಚಿದ್ದು, ಅಂಡೆತಡ್ಕದಲ್ಲಿ ತಲವಾರು ದಾಳಿ, ಹಳೇಗೇಟು ಬಳಿ ತಲವಾರು ದಾಳಿ ಈ ರೀತಿಯಾಗಿ ಪದೇ ಪದೇ ಘಟನೆಗಳು ನಡೆದಿದ್ದು, ಇದರಲ್ಲಿ ಭಾಗಿಯಾಗಿರುವ ಕಾನೂನು ಭಂಜಕರನ್ನು ಜಾತಿ, ಧರ್ಮ, ಪಕ್ಷ ಭೇದ ಮರೆತು ಅವರು ಬಂಧಿಸಿ ದಂಡಿಸಬೇಕು ಇಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪ್ಪಿನಂಗಡಿ ನಾಗರೀಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಹೇಳಿದರು.

ಅವರು ಉಪ್ಪಿನಂಗಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜನರು ಗುಂಪು ಸೇರಿದಾಗ ಅವರನ್ನು ಚದುರಿಸಲು ಅನಿವಾರ್‍ಯ ಪರಿಸ್ಥಿತಿಯಲ್ಲಿ ಲಘು ಲಾಠಿ ಚಾರ್ಜು ಮಾಡುವುದು ಪೊಲೀಸ್ ವ್ಯವಸ್ಥೆಯ ಒಂದು ಭಾಗವಾಗಿದೆ. ಆದರೆ ಇಲ್ಲಿ ಲಾಠಿಯಿಂದ ತಲೆಗೆ ಹೊಡೆದು ಅಮಾನುಷವಾದ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಘನಘೋರ ಕೃತ್ಯ ನಡೆಸಿರುವುದು ಸರಿ ಅಲ್ಲ, ಇದು ಖಂಡನೀಯವಾಗಿದೆ ಎಂದು ಅವರು ಹೇಳಿದರು.

ಪೊಲೀಸರು ಇಲ್ಲಿ ತೀರಾ ತಾರತಮ್ಯ ಮಾಡಿರುವುದು ಸ್ಪಷ್ಠವಾಗಿ ಗೋಚರಿಸುತ್ತಿದೆ. ಹೀಗಾದಾಗ ಪೊಲೀಸರ ಮೇಲೆ ಅಪನಂಬಿಕೆ ಮೂಡುತ್ತದೆ. ನಾಗರೀಕರಲ್ಲಿ ಭೀತಿ, ಸಂಶಯದ ವಾತಾವರಣ ಸೃಷ್ಠಿಯಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಸತ್ಯ ಅನ್ವೇಷಣೆ ಮಾಡಬೇಕು, ಅಮಾಯಕರನ್ನು ಬಲಿಪಶು ಮಾಡದೆ ನಿಜವಾದ ಅಪರಾಧಿಗಳನ್ನು ಬಂಧಿಸಿ ನಾಗರೀಕ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದರು. ಯಾರದ್ದೋ ಸ್ವಾರ್ಥ ಸಾಧನೆಗಾಗಿ ಅಮಾಯಕ ಯುವಕರನ್ನು ಪ್ರತಿಭಟನೆಗೆ ಕರೆಸಲಾಗುತ್ತಿದೆ. ಬೇಡಿಕೆಯ ಇತಿಮಿತಿಯನ್ನು ಅರಿಯದ ಅಮಾಯಕ ಯುವಕರು ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿದು ಹೋರಾಡುತ್ತಾ ಹಿಂಸಾಚಾರಕ್ಕೆ ತುತ್ತಾಗುತ್ತಿರುವುದು ಖೇದಕರ ವಿದ್ಯಾಮಾನವಾಗಿದೆ. ಇಂತಹ ನಡೆಯಿಂದ ಸಮಾಜದಲ್ಲಿ ಪರಸ್ಪರ ಅವಿಶ್ವಾಸ ಮೂಡಿ ಸಮಾಜದ ಆರೋಗ್ಯ ಕೆಡುವಂತಾಗುತ್ತದೆ. ಸಾರ್ವನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ದಿನವಿಡೀ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿರುವುದು ಪೊಲೀಸ್ ಮಾಡಿರುವ ತಪ್ಪು, ಒಟ್ಟಿನಲ್ಲಿ ಉಪ್ಪಿನಂಗಡಿಯ ಶಾಂತಿ ಕದಡಿಸುವ ಯತ್ನದ ವಿರುದ್ದ ಉಭಯ ಸಮುದಾಯಗಳ ಮುಂದಾಳುಗಳು ಒಗ್ಗೂಡಿ ಶ್ರಮಿಸುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.

ಉಪ್ಪಿನಂಗಡಿಯ ಪೊಲೀಸರು ನಡೆದಿರುವ ಘಟನೆಯನ್ನು ತಿಳಿಗೊಳಿಸುವ ಸಲುವಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶುಕೂರು ಹಾಜಿ ಶುಕ್ರಿಯಾ, ಜಲೀಲ್ ಮುಕ್ರಿ, ಅಮೀನ್ ಅಹ್ಸನ್, ಈಸುಬು ಹಾಜಿ ಪೆದಮಲೆ, ನಝೀರ್ ಮಠ, ಹನೀಫ್ ನೆಕ್ಕಿಲಾಡಿ ಇದ್ದರು.

Leave a Reply

Your email address will not be published. Required fields are marked *

error: Content is protected !!