ಟ್ರಾಫಿಕ್ ಸಿಗ್ನಲ್ ನಲ್ಲಿ ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯಿಂದ ಹಣ ಎಗರಿಸಿದ 8ರ ಬಾಲಕ
ಚೆನ್ನೈ: ಖ್ಯಾತ ತಮಿಳು ನಟಿ ನಿವೇತಾ ಪೇತುರಾಜ್ ಅವರ ಬಳಿಯಿಂದ 8 ವರ್ಷದ ಬಾಲಕನೊಬ್ಬ ಹಣ ಕಸಿದುಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ.
ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ನಿವೇತಾ ಪೇತುರಾಜ್ ತಮ್ಮ ಜತೆ ನಡೆದ ಕಹಿ ಘಟನೆಯೊಂದರ ಬಗ್ಗೆ ಬರೆದುಕೊಂಡಿದ್ದಾರೆ. ಘಟನೆಯ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್‌ನ ಸ್ಟೋರಿ ಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅವರು ಹಂಚಿಕೊಂಡ ಘಟನೆಯ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೆನ್ನೈನ ಅಡ್ಯಾರ್ ಸಿಗ್ನಲ್ ನಲ್ಲಿ ತಮ್ಮ ಕಾರಿನಲ್ಲಿದ್ದ ನಿವೇತಾ ಅವರ ಬಳಿ 8 ವರ್ಷ ಬಾಲಕನೊಬ್ಬ ಪುಸ್ತಕ ಮಾರುತ್ತಾ ಬಂದಿದ್ದಾನೆ. 50 ರೂಪಾಯಿಗೆ ಪುಸ್ತಕ ಮಾರಾಟ ಮಾಡುತ್ತಿದ್ದ ಬಾಲಕನ ಕೈಗೆ ನಟಿ 100 ರೂಪಾಯಿ ಕೊಟ್ಟಿದ್ದಾರೆ. ಆದರೆ ಈ ವೇಳೆ ಬಾಲಕ ನಟಿಯಿಂದ 500 ರೂಪಾಯಿ ಕೇಳಿದ್ದಾನೆ. ಇದಕ್ಕೆ ನಿವೇತಾ ಅವರು ಕೂಡಲೇ ಪುಸ್ತಕವನ್ನು ಹಿಂದಕ್ಕೆ ಕೊಟ್ಟು 100 ರೂಪಾಯಿ ವಾಪಾಸ್ ತೆಗೆದುಕೊಂಡಿದ್ದಾರೆ. ಇದರಿಂದ ಬಾಲಕ ನಟಿಯ ಕಾರಿನೊಳಗೆ ಪುಸ್ತಕ ಬಿಸಾಕಿ ಕೈಯಲ್ಲಿದ್ದ ಹಣವನ್ನು ಕಸಿದು ಸೀದಾ ಓಡಿ ಹೋಗಿದ್ದಾನೆ.