ಪಣಂಬೂರು ಬೀಚ್: ಕಾರಿನೊಳಗಡೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ಕಳವು

ಮಂಗಳೂರು: ಚಿನ್ನಾಭರಣ, ನಗದು ಮತ್ತು ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್ ಕಳವಾಗಿರುವ ಘಟನೆ ಪಣಂಬೂರು ಬೀಚ್‌ನ ಹೊಟೇಲ್ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನೊಳಗಡೆ ನಡೆದಿದೆ.
ನಹೀಂ ಅಹಮದ್ ಅವರು ಅ.30ರಂದು ರಾತ್ರಿ 9 ಗಂಟೆಗೆ ಕುಟುಂಬಸ್ಥರ ಜತೆ ಪಣಂಬೂರು ಬೀಚ್‌ಗೆ ಬಂದು ಬೀಚ್ ಪಕ್ಕದ ಹೊಟೇಲ್ ಸಮೀಪದಲ್ಲಿ ಕಾರು ನಿಲ್ಲಿಸಿ ಕಾರಿನ ಮುಂದಿನ ಮತ್ತು ಹಿಂದಿನ ಗಾಜುಗಳನ್ನು ಇಳಿಸಿ ಕಾರಿನಲ್ಲಿ ನಿದ್ದೆ ಮಾಡುತ್ತಿದ್ದ 2 ಸಣ್ಣ ಮಕ್ಕಳನ್ನು ಹಾಗೂ ಹ್ಯಾಂಡ್‌ಬ್ಯಾಗ್ ಮತ್ತು ಲಗೇಜ್ ಬ್ಯಾಗ್‌ಗಳನ್ನು ಕೂಡ ಕಾರಿನಲ್ಲಿ ಬಿಟ್ಟು ಪತ್ನಿ ಮತ್ತು ದೊಡ್ಡ ಮಗಳ ಜತೆ ಬೀಚ್ ವೀಕ್ಷಣೆಗೆ ಹೋಗಿದ್ದರು. ಸುಮಾರು 15 ನಿಮಿಷದಲ್ಲಿ ವಾಪಸ್ ಬಂದು ಉಳ್ಳಾಲ ದರ್ಗಾಕ್ಕೆ ಹೋಗಿದ್ದರು.
ದರ್ಗಾದಿಂದ ವಾಪಸ್ ಬಂದು ಕಾರಿನಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ನ್ನು ಚಾರ್ಜ್ ಮಾಡಲು ಪವರ್‌ಬ್ಯಾಂಕ್ ಹುಡುಕಿದಾಗ ವ್ಯಾನಿಟಿ ಬ್ಯಾಗ್ ಇರಲಿಲ್ಲ. ಕೂಡಲೇ ಪಣಂಬೂರು ಬೀಚ್‌ಗೆ ಬಂದು ಕಾರು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬ್ಯಾಗ್ ಅಲ್ಲಿಯೇ ಚರಂಡಿ ಬದಿಯಲ್ಲಿ ಬಿದ್ದುಕೊಂಡಿತ್ತು.ಅದರಲ್ಲಿದ್ದ 30 ಗ್ರಾಂ ತೂಕದ ಪದಕವಿರುವ ಮಾಂಗಲ್ಯಸರ, 12 ಗ್ರಾಂ ತೂಕದ 1 ಚೈನ್, 4 ಚಿನ್ನದ ಉಂಗುರಗಳು, ಬೆಳ್ಳಿಯ ಕಾಲ್ಗೆಜ್ಜೆ, ಒಂದು ಜತೆ ಕಿವಿಯೋಲೆ, 7,000 ರೂ. ನಗದು ಹಣ, ವಿವೋ ಕಂಪೆನಿಯ ಮೊಬೈಲ್ ಸೇರಿದಂತೆ ಸುಮಾರು 2.50 ಲ.ರೂ. ಮೌಲ್ಯದ ಚಿನ್ನಾಭರಣ ಸಹಿತ ಸುಮಾರು 2.67 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.