ಪ್ರಿಯಕರನಿಗಾಗಿ ನಕಲಿ ಸಬ್ ಇನ್ ಸ್ಪೆಕ್ಟರ್ ಯುವತಿಯ ಬಂಧನ

ತಮಿಳುನಾಡು: ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಪೊಲೀಸ್ ಸಮವಸ್ತ್ರದಲ್ಲಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ಗೆ ಆಗಮಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತ ಯುವತಿಯನ್ನು ಅಭಿಪ್ರಭಾ (34) ಎಂದು ಗುರುತಿಸಲಾಗಿದೆ. ಈಕೆ ಥೇನಿ ಪೆರಿಯಕುಲಂ ಮೂಲದ ನಿವಾಸಿ. ಪಾರ್ವತಿಪುರಂ ಮೂಲದ ವೆಂಕಟೇಶ್ ಎಂಬುವವರ ನೀಡಿದ ದೂರಿನ ಮೇರೆಗೆ ವಡಸೇರಿ ಪೊಲೀಸರು ಅಭಿಪ್ರಭಾಳನ್ನು ಬಂಧಿಸಿದ್ದಾರೆ. ವಂಚನೆ ಮತ್ತು ಪೊಲೀಸರ ಸೋಗು ಹಾಕಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.
ನಾಗರಕೋಯಿಲ್ನಲ್ಲಿರುವ ಮಹಿಳಾ ಕಾಲೇಜಿಗೆ ಭೇಟಿ ನೀಡಿದ ಬಳಿಕ ವಡಸೇರಿಯಲ್ಲಿರುವ ದೂರುದಾರ ವೆಂಕಟೇಶ್ ಪತ್ನಿಯ ಬ್ಯೂಟಿ ಪಾರ್ಲರ್ಗೆ ಆರೋಪಿ ಅಭಿಪ್ರಭಾ ಭೇಟಿ ನೀಡಿದ್ದಳು. ಫೇಶಿಯಲ್ ಮಾಡಿಸಿಕೊಂಡು ಹಣ ಕೊಡದೆ ಅಲ್ಲಿಂದ ತೆರಳಿದ್ದಳು. ಹಣ ಕೇಳಿದ್ದಕ್ಕೆ ನಾನು ವಡಸೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂದು ಗದರಿಸಿ ಅಲ್ಲಿಂದ ಹೋಗಿದ್ದಳು. ಆಕೆಯ ವರ್ತನೆಯಿಂದ ಅನುಮಾನಗೊಂಡ ವೆಂಕಟೇಶ್, ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆಕೆಯನ್ನು ಬಂಧಿಸಲಾಗಿದೆ.