ಉಚಿತ ಪ್ರಯಾಣ ಬೇಡವೆಂದು ಮಹಿಳೆಯರೇ ಹೇಳುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ಯಾರಂಟಿಗಳ ಮರುಪರಿಶೀಲನೆ ಬಗ್ಗೆ ಆಗಾಗ್ಗೆ ಕೇಳಿಬರುವ ಪರ-ವಿರೋಧಗಳ ನಡುವೆಯೇ ಸರಕಾರ ತನ್ನ ಮೊದಲ ಗ್ಯಾರಂಟಿಯಾದ “ಶಕ್ತಿ’ ಯೋಜನೆ ಬಗ್ಗೆ ಮರುಚಿಂತನೆಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದು, ಉಚಿತ ಪ್ರಯಾಣ ಬೇಡ ಎಂದು ಮಹಿಳೆಯರೇ ಹೇಳುತ್ತಿದ್ದಾರೆ ಎಂದಿದ್ದಾರೆ.
ವಿಧಾನಸೌಧ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನೇಕ ಮಹಿಳೆಯರು ತಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ನನಗೆ ಟ್ವೀಟ್ ಹಾಗೂ ಇ-ಮೇಲ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಯೋಚನೆ ಮಾಡಬೇಕಾದ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.