ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಇಂದು ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಳೆದ 63 ದಿನಗಳಿಂದ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಚಿಕಿತ್ಸೆಗಾಗಿ ದರ್ಶನ್ ಪರ ವಕೀಲರು ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈದ್ಯರ ವರದಿ ಆಧರಿಸಿ 6 ವಾರಗಳ ಮಧ್ಯಂತರ ಜಾಮೀನಿ ನೀಡಿದೆ.
ಬಳ್ಳಾರಿ ಜೈಲಿನಲ್ಲಿ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಟ ದರ್ಶನ್ ಅವರು ಒಟ್ಟು 131 ದಿನಗಳ ನಂತರ ಜೈಲಿನಿಂದ ಹೊರಗೆ ಬಂದಿದ್ದಾರೆ. ಸಂಜೆ 6 ಗಂಟೆಗೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದು, ಬಿಡುಗಡೆ ಬಳಿಕ ನಟ ದರ್ಶನ್ ಬಳ್ಳಾರಿಯಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದಾರೆ. ದರ್ಶನ್ ಜೈಲಿನ ಹೊರಗೆ ಕಾಯುತ್ತಿದ್ದ ಪತ್ನಿ ವಿಜಯಲಕ್ಷ್ಮೀ ಅವರ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಇಂದು ರಾತ್ರಿ ಬೆಂಗಳೂರು ತಲುಪಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಳೆದ ಜೂನ್ 11 ರಂದು ದರ್ಶನ್ ಬಂಧನವಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ನಂತರ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪ್ರಕರಣದಲ್ಲಿ ಆತನ ಸ್ನೇಹಿತೆ ಪವಿತ್ರಾ ಗೌಡ ಸೇರಿ 15 ಮಂದಿ ಸಹ ಆರೋಪಿಗಳಾಗಿದ್ದಾರೆ. ಪವಿತ್ರಾ ಬೆಂಗಳೂರಿನ ಜೈಲಿನಲ್ಲಿ ಮತ್ತು ಇತರರು ರಾಜ್ಯದ ವಿವಿಧ ಜೈಲುಗಳಲ್ಲಿದ್ದಾರೆ. ಅವರಲ್ಲಿ ಕೆಲವರು ಇತ್ತೀಚೆಗೆ ಜಾಮೀನು ಪಡೆದಿದ್ದಾರೆ.