ಜಪ್ತಿ ಮಾಡಿದ ಲಾರಿಗೆ 8 ಲಕ್ಷ ರೂ. ನೀಡುವಂತೆ ಅಧಿಕಾರಿಗಳಿಂದ ಕಿರುಕುಳ: ಗಣಿ ಇಲಾಖೆಯ ಕಚೇರಿ ಬಳಿಯೇ ಲಾರಿ ಮಾಲಕ ಆತ್ಮಹತ್ಯೆ
ರಾಮನಗರ: ನಗರದ ಹೊರವಲಯದ ವಡೇರಹಳ್ಳಿಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಬಳಿ ಸೋಮವಾರ ಲಾರಿ ಮಾಲೀಕ ನಾಗೇಶ್ ಸಿ. (45) ಎಂಬುವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರಡ.
ಲಾರಿ ಜಪ್ತಿ ಮಾಡಿದ್ದ ಅಧಿಕಾರಿಗಳು ದಂಡದ ಹೆಸರಿನಲ್ಲಿ 8 ಲಕ್ಷ ನೀಡುವಂತೆ ಕಿರುಕುಳ ನೀಡಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಸಾಲ ಮಾಡಿ ಲಾರಿ ಖರೀದಿಸಿದ್ದ ನಾಗೇಶ್ ಜಲ್ಲಿ ಸಾಗಿಸುತ್ತಿದ್ದರು. ಲಾರಿ ತಡೆದಿದ್ದ ಅಧಿಕಾರಿಗಳು ಖನಿಜ ಸಾಕಾಣಿಕೆ ಪರವಾನಗಿ ಇಲ್ಲದೆ ಜಲ್ಲಿ ಸಾಗಿಸುತ್ತಿರುವ ಕುರಿತು ಅ. 9ರಂದು ನಾಗೇಶ್ ಅವರಿಗೆ ನೋಟಿಸ್ ಕಳಿಸಿ, 15 ದಿನದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು. ನಾಗೇಶ್ ಕಚೇರಿಗೆ ಹೋದಾಗ ದಂಡದ ಹೆಸರಿನಲ್ಲಿ ₹8 ಲಕ್ಷ ನೀಡುವಂತೆ ಕಿರುಕುಳ ಕೊಟ್ಟಿದ್ದರು’ ಎಂದು ಅವರ ಕುಟುಂಬದವರು ದೂರಿದರು.





