December 15, 2025

ಮಂಗಳೂರು: ನಿಂತಿದ್ದ ರೈಲಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿ ಬಂಟ್ವಾಳದ ವ್ಯಕ್ತಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

0
Child-Abuse-1

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಅಬುತಾಹಿರ್ ಅಲಿಯಾಸ್ ಶಾಝಿಲ್ ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ತ್ವರಿತಗತಿ ವಿಶೇಷ ನ್ಯಾಯಾಲಯ ಮತ್ತು ಪೊಕ್ಸೊ ವಿಶೇಷ ನ್ಯಾಯಾಲಯ (ಎಎಫ್.ಟಿ.ಎಸ್.ಸಿ–2) 20 ವರ್ಷಗಳ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದೆ.

ಫೋನ್ ನಲ್ಲಿ ಪರಿಚಯವಾಗಿದ್ದ ಅಬುತಾಹಿರ್ ಬಾಲಕಿಯ ಸಂಪರ್ಕದಲ್ಲಿದ್ದ. ಆಕೆಯನ್ನು ಪ್ರೀತಿಸುವುದಾಗಿ ಹೇಳಿ 2023ರ ಜೂನ್ 22ರಂದು ಶಾಲೆಗೆ ತೆರಳಲು ಮನೆಯಿಂದ ಹೊರಟು ಬಂದ ಬಾಲಕಿಯನ್ನು ಭೇಟಿಯಾಗಿದ್ದ. ಆಕೆಯನ್ನು ಬಲವಂತದಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಗೋವಾಕ್ಕೆ ಹೋಗೋಣ ಎಂದು ಆಕೆಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ. ಅಲ್ಲಿ ಪ್ಲಾಟ್ ಫಾರ್ಮ್ ನಂ 3ರಲ್ಲಿ ನಿಂತಿದ್ದ ಮಂಗಳೂರು–ಮಡಗಾಂವ್ ರೈಲಿನ ಬೋಗಿಯೊಂದರ ಸೀಟಿನಲ್ಲಿ ಆಕೆಯನ್ನು ಮಲಗಿಸಿ ರಾತ್ರಿ 11ರಿಂದ 12 ಗಂಟೆಯ ನಡುವೆ ಆತ್ಯಾಚಾರ ಮಾಡಿದ್ದ ಎಂದು ತಿಳಿದು ಬಂದಿದೆ.

ಬಾಲಕಿ ಕಾಣೆಯಾದ ಬಗ್ಗೆ ಆಕೆಯ ತಾಯಿ ಪುಂಜಾಲಕಟ್ಟೆ ಠಾಣೆಗೆ ಅಂದೇ ದೂರು ನೀಡಿದ್ದರು. ಬಾಲಕಿಯು ರಾತ್ರಿ 12ರ ಸುಮಾರಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ತಾಯಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಳು. ತಾಯಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ರೈಲು ನಿಲ್ದಾಣದಲ್ಲಿ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣ), 376(1) (ಲೈಂಗಿಕ ದೌರ್ಜನ್ಯ), 376(3) (ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ), ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 4(2) (ಬಾಲಕಿ ಮೇಲೆ ಅತ್ಯಾಚಾರ) ಅನ್ವಯ ಪ್ರಕರಣ ದಾಖಲಾಗಿತ್ತು. ಠಾಣೆಯ ಆಗಿನ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ನಾಗೇಶ್ ಕೆ. ಅವರು ತನಿಖೆ ಪೂರ್ಣಗೊಳಿಸಿ ಅಬುತಾಹಿರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 17 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 31 ದಾಖಲೆಗಳನ್ನು ಗುರುತಿಸಲಾಗಿತ್ತು. ಅಬುತಾಹೀರ್ ಅಪರಾಧ ಕೃತ್ಯ ನಡೆಸಿರುವುದು ಸಾಬೀತಾಗಿತ್ತು.

Leave a Reply

Your email address will not be published. Required fields are marked *

error: Content is protected !!